6 ಫೆಲೆಸ್ತೀನ್ ಮಾನವಹಕ್ಕು ಸಂಘಟನೆಗಳಿಗೆ ಇಸ್ರೇಲ್ ನಿಷೇಧ: ಉಗ್ರ ಗುಂಪುಗಳೆಂದು ಘೋಷಣೆ

Update: 2021-10-24 16:31 GMT

ಹೊಸದಿಲ್ಲಿ,ಅ.24: ಇಸ್ರೇಲ್ ಅಕ್ಟೋಬರ್ 22ರಂದು ಆರು ಪ್ರಮುಖ ಫೆಲೆಸ್ತೀನ್ ಮಾನವಹಕ್ಕು ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿ ನಿಷೇಧಿಸಿದೆ. ಈ ಘೋಷಣೆಯಿಂದಾಗಿ ಇನ್ನು ಮುಂದೆ ಇಸ್ರೇಲ್ ಗೆ ಈ ಸಂಘಟನೆಗಳ ಕಚೇರಿಗಳ ಮೇಲೆ ದಾಳಿ ನಡೆಸಲು, ಅವುಗಳ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಲು, ಸಿಬ್ಬಂದಿಯನ್ನು ಬಂಧಿಸಲು ಸಾಧ್ಯವಾಗಲಿದೆ. ಅಲ್ಲದೆ ಈ ಗುಂಪುಗಳನ್ನು ಬೆಂಬಲಿಸಿ ಬಹಿರಂಗವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಬಹುದಾಗಿದೆ. ನಿಷೇಧಕ್ಕೊಳಗಾಗಿರುವ ಈ ಸಂಘಟನೆಗಳಲ್ಲಿ ಹೆಚ್ಚಿನವು ಇಸ್ರೇಲ್ ಹಾಗೂ ಫೆಲೆಸ್ತೀನ್ ಪ್ರಾಧಿಕಾರವು ನಡೆಸಿದ ಮಾನವಹಕ್ಕು ಉಲ್ಲಂಘನೆಗಳ ಘಟನೆಗಳನ್ನು ದಾಖಲಿಸಿಕೊಂಡಿವೆ. ಇಸ್ರೇಲ್ ಹಾಗೂ ಫೆಲೆಸ್ತೀನ್ ಪ್ರಾಧಿಕಾರ ಇವೆರಡೂ ಆಗಾ ಗ್ಗೆ ಫೆಲೆಸ್ತೀನ್ ಹೋರಾಟಗಾರರನ್ನು ಬಂಧಿಸುತ್ತಿರುತ್ತವೆ.

ಇಸ್ರೇಲ್ ಸರಕಾರದ ಕ್ರಮವನ್ನು ಇಸ್ರೇಲಿ ಹಾಗೂ ಅಂತಾರಾಷ್ಟ್ರೀಯ ಮಾನವಹಕ್ಕು ಸಂಘಟನೆಗಳು ಖಂಡಿಸಿದ್ದು, ನಿಷೇಧಕೊಳಗಾದ ಸಂಘಟನೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ.ಇಸ್ರೇಲ್ ಈಗಾಗಲೇ ಆಕ್ರಮಿತ ಪಶ್ಚಿಮದಂಡೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಕೂಡಾ ನಿಷೇಧಿಸಿರುವುದನ್ನು ಕೂಡಾ ಹಲವು ಸಂಘಟನೆಗಳು ಗಮನಕ್ಕೆ ತಂದಿವೆ.

1979ರಲ್ಲಿ ಸ್ಥಾಪನೆಯಾದ ಮಾನವಹಕ್ಕುಗಳ ಸಂಘಟನೆಯಾದ ಅಲ್ಹಕ್, ಅಡ್ಡಾಮೀರ್ ರೈಟ್ಸ್ ಗ್ರೂಪ್, ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್ನ್ಯಾಶನಲ್-ಫೆಲೆಸ್ತೀನ್, ಬಿಸಾನ್ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್, ಮಹಿಳಾ ಸಮಿತಿಗಳ ಫೆಲೆಸ್ತೀನ್ ಒಕ್ಕೂಟ ಹಾಗೂ ಕೃಷಿ ಕಾರ್ಯ ಸಮಿತಿಗಳ ಒಕ್ಕೂಟ ಇಸ್ರೇಲ್ ನಿಂದ ನಿಷೇಧಕ್ಕೊಳಗಾದ ಮಾನವಹಕ್ಕು ಸಂಘಟನೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News