ಎಡಪಂಥೀಯ ಹೋರಾಟದಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಸಿಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ: ವಿಠಲ ಮಲೆಕುಡಿಯ

Update: 2021-10-24 16:58 GMT

ಬೆಳ್ತಂಗಡಿ : ಎಡಪಂಥೀಯ ಹೋರಾಟದಿಂದ ಇಡೀ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಸಿಗಳು ಇಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಪತ್ರಕರ್ತ, ನಕ್ಸಲ್ ಆರೋಪ ಹೊತ್ತು ನ್ಯಾಯಾಲಯದಿಂದ ನಿರ್ದೂಷಿಯಾದ ವಿಠಲ ಮಲೆಕುಡಿಯ ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಿಪಿಐ(ಎಂ) ಹಾಗೂ ಎಡಪಂಥೀಯ ಸಂಘಟನೆಗಳ ಗೌರವಾರ್ಪಣೆ ಸ್ವೀಕರಿಸಿ ಮಾತನಾಡುತ್ತಿದ್ದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಒಕ್ಕಲೆಬ್ಬಿಸುವ ವಿರುದ್ಧ ಧ್ವನಿ ಎತ್ತಿದ ಕಾರಣದಿಂದಾಗಿ ಚಹಾ ಹುಡಿ, ಸಕ್ಕರೆ ತಟ್ಟೆ, ಚಾಪೆ ಮುಂತಾದ ನಿತ್ಯೋಪಯೋಗಿ ವಸ್ತುಗಳು , ಆಟಿಕೆ ಬೈನಾಕೂಲರ್ , ಭಗತ್ ಸಿಂಗ್ ಪುಸ್ತಕ ಮನೆಯಲ್ಲಿ ಸಿಕ್ಕಿದೆ ಎಂದು ನನ್ನ ಹಾಗೂ ತಂದೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ಎಎನ್ಎಫ್ ಪೊಲೀಸರಿಗೆ ಹಾಗೂ ಅಂದಿನ ಸರ್ಕಾರಕ್ಕೆ ಈ ತೀರ್ಪು ಹಿನ್ನಡೆ ಹಾಗೂ ಮುಖಭಂಗವಾಗಿದೆ ಎಂದ ಅವರು ಅಂದು ನಮ್ಮ ಕುಟುಂಬ ಅತ್ಯಂತ ಸಂಕಷ್ಟ ಸವಾಲುಗಳನ್ನು ಎದುರಿಸಿತ್ತು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಲಾಯಿಲ ರವರು ವಿಠಲ ಮಲೆಕುಡಿಯ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ದೇಶದ ಜನಪರ ಚಳವಳಿಗೆ ಸ್ಪೂರ್ತಿಯಾಗಿದೆ ಎಂದರು.

ವಿಠಲ ಮಲೆಕುಡಿಯ ಜೊತೆಗೆ ಅವರ ತಂದೆ ನಿಂಗಣ್ಣ ಮಲೆಕುಡಿಯ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಹರಿದಾಸ್ ಎಸ್ ಎಂ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐ(ಎಂ) ರಾಜ್ಯ ಮುಖಂಡರಾದ ವಸಂತ ಆಚಾರಿ , ಯಾದವ ಶೆಟ್ಟಿ , ಶಿವಕುಮಾರ್ ಎಸ್. ಎಂ, ಜಯಂತಿ ನೆಲ್ಲಿಂಗೇರಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ, ಕಾರ್ಯದರ್ಶಿ ಜಯಾನಂದ, ಮುಖಂಡರಾದ ಪೂವಪ್ಪ ಮಲೆಕುಡಿಯ ಕುತ್ಲೂರು , ಸುಂದರ ಮಲೆಕುಡಿಯ ನೆರಿಯ, ನಾರಾಯಣ ಮಲೆಕುಡಿಯ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News