×
Ad

ಇಂದಿನಿಂದ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಶ್ರೇಷ್ಠ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿ ಭಾರತ

Update: 2021-10-24 23:55 IST

ಬೆಲ್ ಗ್ರೆಡ್, ಅ.24: ಬಹುಪಾಲು ಹೊಸಬರನ್ನು ಒಳಗೊಂಡಿರುವ ಭಾರತದ ಪುರುಷರ ಬಾಕ್ಸಿಂಗ್ ತಂಡ ಸೋಮವಾರದಿಂದ ಆರಂಭವಾಗಲಿರುವ ಎಐಬಿಎ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಕಠಿಣ ಸವಾಲು ಎದುರಿಸಲಿದೆ. ಕಳೆದ ಆವೃತ್ತಿಯಲ್ಲಿ ಎರಡು ಪದಕಗಳನ್ನು ಜಯಿಸಿರುವ ಭಾರತವು ಈ ಬಾರಿ ಪ್ರದರ್ಶನ ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

2019ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ದೇಶಕ್ಕೆ ಮೊದಲ ಬಾರಿ ಬೆಳ್ಳಿ ಪದಕವನ್ನು ಗೆದ್ದುಕೊಟ್ಟಿರುವ ವಿಶ್ವದ ನಂ.1 ಬಾಕ್ಸರ್ ಅಮಿತ್ ಪಾಂಘಾಲ್ ಹಾಗೂ ಅದೇ ವರ್ಷ ಕಂಚಿನ ಪದಕವನ್ನು ಜಯಿಸಿದ್ದ ಮನೀಶ್ ಕೌಶಿಕ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಸರ್ಬಿಯದ ರಾಜಧಾನಿಗೆ ಅ.20ರಂದು ತೆರಳಿರುವ ಭಾರತ ತಂಡದಲ್ಲಿ ಏಶ್ಯನ್ ಪದಕ ವಿಜೇತರುಗಳಾದ ದೀಪಕ್ ಕುಮಾರ್(51ಕೆಜಿ), ಶಿವ ಥಾಪ(63.5 ಕೆಜಿ) ಹಾಗೂ ಸಂಜೀತ್(92 ಕೆಜಿ) ಅವರಿದ್ದಾರೆ. ಸಂಜೀತ್ ಹಾಲಿ ಏಶ್ಯನ್ ಚಾಂಪಿಯನ್ ಆಗಿದ್ದು, ದೀಪಕ್ ಬೆಳ್ಳಿ ಪದಕ ವಿಜೇತರಾಗಿದ್ದಾರೆ ಹಾಗೂ ಶಿವ ಥಾಪ ದಾಖಲೆ ಐದು ಬಾರಿ ಪದಕ ಜಯಿಸಿದ್ದಾರೆ. ಶಿವ ಥಾಪಗೆ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವ ಅನುಭವವಿದ್ದು, 2015ರ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಟೂರ್ನಮೆಂಟ್‌ನಲ್ಲಿ 105 ದೇಶಗಳ 600ಕ್ಕೂ ಅಧಿಕ ಬಾಕ್ಸರ್‌ಗಳು ಸ್ಪರ್ಧೆಗಿಳಿಯಲು ಸಜ್ಜಾಗಿದ್ದಾರೆ. ಚಿನ್ನದ ಪದಕ ವಿಜೇತ ಬಾಕ್ಸರ್ 1,00,000 ಯುಎಸ್ ಡಾಲರ್ ಬಹುಮಾನ ಪಡೆದರೆ, ಬೆಳ್ಳಿ ಪದಕ ವಿಜೇತ ಬಾಕ್ಸರ್ 50,000 ಯುಎಸ್ ಡಾಲರ್ ಗೆಲ್ಲಲಿದ್ದಾರೆ. ಕಂಚಿನ ಪದಕ ವಿಜೇತರು ತಲಾ 25,000 ಯುಎಸ್ ಡಾಲರ್ ಬಹುಮಾನ ಗೆಲ್ಲಲಿದ್ದಾರೆ.

► ಭಾರತದ ಬಾಕ್ಸಿಂಗ್ ತಂಡ:  ಗೋವಿಂದ ಸಹಾನಿ(48ಕೆಜಿ), ದೀಪಕ್ ಕುಮಾರ್(51ಕೆಜಿ), ಆಕಾಶ್(54ಕೆಜಿ) ರೋಹಿತ್ ಮೋರ್(57ಕೆಜಿ), ವರಿಂದರ್ ಸಿಂಗ್(60 ಕೆಜಿ), ಶಿವ ಥಾಪ(63.5 ಕೆಜಿ), ಆಕಾಶ್(67 ಕೆಜಿ), ನಿಶಾಂತ್ ದೇವ್(71ಕೆಜಿ), ಸುಮಿತ್ (75ಕೆಜಿ), ಸಚಿನ್ ಕುಮಾರ್(80ಕೆಜಿ), ಲಕ್ಷ್ಯ(86ಕೆಜಿ), ಸಂಜೀತ್(92ಕೆಜಿ) ಹಾಗೂ ನರೇಂದರ್(_92ಕೆಜಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News