ವಾಮಂಜೂರು: ಎಸ್‌ಸಿಡಿಸಿಸಿ ಬ್ಯಾಂಕ್‌ನ ಸ್ಥಳಾಂತರಿತ ಶಾಖೆ ಉದ್ಘಾಟನೆ

Update: 2021-10-25 06:06 GMT

ಮಂಗಳೂರು, ಅ.25: ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. (ಎಸ್‌ಸಿಡಿಸಿಸಿ ಬ್ಯಾಂಕ್)ನ ಸ್ಥಳಾಂತರಿತ ವಾಮಂಜೂರು ಶಾಖೆಯು ಸೋಮವಾರ ಉದ್ಘಾಟನೆಗೊಂಡಿತು.

ಶಾಸಕ‌‌ ಡಾ. ಭರತ್ ವೈ. ಶೆಟ್ಟಿ ಅವರು ವಾಮಂಜೂರಿನ ‘ಸಾಯಿ ಆಯಿಷಾ'  ಕಟ್ಟಡದ ಪ್ರಥಮ ಅಂತಸ್ತಿನಲ್ಲಿ ತೆರೆಯಲ್ಪಟ್ಟ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ಯಾಂಕ್‌ನ ಸಾರಥ್ಯ ವಹಿಸಿರುವ ಡಾ.ಎಂ.ಎನ್‌. ರಾಜೇಂದ್ರ ಕುಮಾರ್, ಸಹಕಾರಿ ಕ್ಷೇತ್ರದಲ್ಲಿ ಅಸಾಧ್ಯವಾದುದನ್ನು ಸಾಧ್ಯ ಅಂತ ತೋರಿಸಿಕೊಟ್ಟಿದ್ದಾರೆ. ಹಣಕಾಸು ವ್ಯವಸ್ಥೆಯನ್ನು  ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರಣ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಯಿತು. ರಾಷ್ಟ್ರೀಕೃತ ಬ್ಯಾಂಕುಗಳ ಎಲ್ಲಾ ಸೌಲಭ್ಯಗಳು ಸಹಕಾರಿ ಬ್ಯಾಂಕ್‌ನಲ್ಲಿ ಸಿಗಲಿದ್ದು, ಗ್ರಾಹಕರು ಇದರ ಸದುಪಯೋಗಿಸಿಕೊಳ್ಳಬೇಕು. ಅಲ್ಲದೆ ಬ್ಯಾಂಕ್‌ನ ಸಿಬ್ಬಂದಿ ವರ್ಗವು ಗ್ರಾಹಕರಿಗೆ ಇನ್ನಷ್ಡು ಉತ್ತಮ ಸೇವೆ ನೀಡಲು ಕಟಿಬದ್ಧರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಹಾಗೂ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕೇವಲ ಎರಡು ವಾರದಲ್ಲಿ ಈ ಶಾಖೆಯ ಮೂಲಕ 4 ಕೋ.ರೂ. ಠೇವಣಿ ಸಂಗ್ರಹಿಸಲಾಗಿದೆ. ಇದು‌ ಇಲ್ಲಿನ ಗ್ರಾಹಕರು ಬ್ಯಾಂಕ್ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಶಾಖೆಯಲ್ಲಿ‌ ಮಹಿಳಾ ಗ್ರಾಹಕರು ಅಧಿಕ ಸಂಖ್ಯೆಯಲ್ಲಿದ್ದು, ಶಾಖೆಗೆ ಮಹಿಳಾ ಮ್ಯಾನೇಜರ್‌ರನ್ನು ನಿಯುಕ್ತಿಗೊಳಿಸಲಾಗಿದೆ. ಅಗತ್ಯವಿದ್ದರೆ ಮಹಿಳಾ  ಸಿಬ್ಬಂದಿ ವರ್ಗವನ್ನು ಕೂಡಾ ನೇಮಿಸಲಾಗುವುದು. ತುರ್ತು ಸಹಿತ ಯಾವುದೇ ರೀತಿಯ ಸಾಲಕ್ಕಾಗಿ ಗ್ರಾಹಕರನ್ನು ಯಾವ ಕಾರಣಕ್ಕೂ ಅಲೆದಾಡಿಸುವುದಿಲ್ಲ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಹೆಚ್ಚಿನ‌ ಆದ್ಯತೆ ನೀಡಲಾಗುವುದು. ಜನವರಿಯಲ್ಲಿ ನವೋದಯ‌ ಗುಂಪಿನ ಸುಮಾರು 4 ಲಕ್ಷ ಮಹಿಳಾ ಸದಸ್ಯರಿಗೆ ಸೀರೆ ಮತ್ತು ಪುರುಷ ಸದಸ್ಯರಿಗೆ ಅಂಗಿ ವಿತರಿಸಲಾಗುವುದು ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ವೇದಿಕೆಯಲ್ಲಿ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಹಾಗೂ ಶಾಖಾ ಕಟ್ಟಡದ ಮಾಲಕ ಅನೋಜ್ ಕುಮಾರ್, ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಪುತ್ತೂರಿನ ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ, ಬ್ಯಾಂಕ್‌ನ ಸಿಇಒ ರವೀಂದ್ರ ಡಿ.  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ವ್ಯವಸ್ಥಾಪಕಿ ರೆಹನತ್ ಅವರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ಅಧಿಕಾರಿಗಳಾದ ವಿಶ್ವನಾಥ ಶೆಟ್ಟಿ, ಕಿರಣ್‌ ಕುಮಾರ್ ಶೆಟ್ಟಿ, ಸಂಜಯ್ ಅಧಿಕಾರಿ, ಹರಿನಾಥ್, ಸುದರ್ಶನ್, ಇಂದಿರಾ, ಹರಿಣಾಕ್ಷಿ, ಅನಿಲ್ ಕ್ರಾಸ್ತ, ವಿನೋದಾ, ಸ್ವಾತಿ, ಪ್ರವೀಣ್ ಅವರನ್ನು ಅಭಿನಂದಿಸಲಾಯಿತು. 

ಬ್ಯಾಂಕಿನ ನಡಾವಳಿ ಪುಸ್ತಕಗಳನ್ನು ವಿತರಿಸುವ ಮೂಲಕ ಹೊಸ ನವೋದಯ ಸ್ವ ಸಹಾಯ ಗುಂಪುಗಳನ್ನು ಉದ್ಘಾಟಿಸಲಾಯಿತು. ಅದಲ್ಲದೆ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಯಿತು. ಬ್ಯಾಂಕಿನ ನಿರ್ದೇಶಕ ಕೆ. ಜೈರಾಜ್ ಬಿ. ರೈ ಸ್ವಾಗತಿಸಿದರು. ನಿರ್ದೇಶಕ ಶಶಿಕುಮಾರ್ ‌ರೈ ವಂದಿಸಿದರು. ಶ್ರೀಹರಿ ಭಟ್ ಕಾರ್ಯಕ್ರಮ ನಿರೂಪಿಸಿದರು.

* ಶಾಖೆಯು ಸಂಪೂರ್ಣ ಗಣಕೀಕೃತ, ಏಕಗವಾಕ್ಷಿ, ಕೋರ್ ಬ್ಯಾಂಕಿಂಗ್ ಹಾಗೂ ಆರ್‌ಟಿಜಿಎಸ್ ಮತ್ತು ನೆಫ್ಟ್ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News