×
Ad

ಪ್ರಕಾಶ್ ಝಾ ಅವರ 'ಆಶ್ರಮ್' ವೆಬ್ ಸರಣಿ ಚಿತ್ರೀಕರಣ ಸ್ಥಳದಲ್ಲಿ ಬಜರಂಗದಳ ಕಾರ್ಯಕರ್ತರ ದಾಂಧಲೆ

Update: 2021-10-25 11:49 IST
Photo: Twitter/Anurag Dwary

ಭೋಪಾಲ್: ಬಜರಂಗದಳ ಕಾರ್ಯಕರ್ತರು ರವಿವಾರ ಭೋಪಾಲ್ ನಗರದಲ್ಲಿ ಪ್ರಕಾಶ್ ಝಾ ವರ ವೆಬ್ ಸರಣಿ ಆಶ್ರಮ್ ಇದರ ಸೆಟ್‍ನಲ್ಲಿ ದಾಂಧಲೆ ನಡೆಸಿದ್ದಾರೆ. ವೆಬ್ ಸರಣಿಯ ಮೂರನೇ ಸೀಸನ್‍ಗಾಗಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಚಿತ್ರ ತಂಡದ ಸದಸ್ಯರನ್ನು ಬಜರಂಗದಳ ಕಾರ್ಯಕರ್ತರು ಬೆನ್ನಟ್ಟುತ್ತಿರುವುದು ಹಾಗೂ ಅವರಲ್ಲೊಬ್ಬರನ್ನು ಥಳಿಸುತ್ತಿರುವುದು ಪ್ರತ್ಯಕ್ಷದರ್ಶಿ ಸಾಕ್ಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವೀಡಿಯೋಗಳಲ್ಲಿ ಕಾಣಿಸುತ್ತದೆ. ಘಟನೆಯಲ್ಲಿ ಚಿತ್ರ ತಂಡದ ಎರಡು ಬಸ್ಸುಗಳ ಗಾಜುಗಳು ಒಡೆದಿವೆ.

ಈ ವೆಬ್ ಸರಣಿಯು ಹಿಂದು ಧರ್ಮದ ಮೇಲಿನ ದಾಳಿಯಾಗಿದೆ ಎಂದು ಹೇಳಿರುವ ಬಜರಂಗದಳ ಕಾರ್ಯಕರ್ತರು, ಸರಣಿಯ ಶೀರ್ಷಿಕೆ ಬದಲಾಯಿಸುವ ತನಕ ಚಿತ್ರೀಕರಣ ಮುಂದುವರಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ ಎಂದು ndtv ವರದಿ ಮಾಡಿದೆ.

"ಅವರು ಆಶ್ರಮ್ 1 ಮತ್ತು ಆಶ್ರಮ್ 2 ಮಾಡಿ ಈಗ ಆಶ್ರಮ್ 3 ಗಾಗಿ ಚಿತ್ರೀಕರಣ ನಡೆಸುತ್ತಿದ್ದರು. ಆಶ್ರಮದ ಗುರು ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿದ್ದುದನ್ನು ಆಶ್ರಮ್‍ನಲ್ಲಿ ಪ್ರಕಾಶ್ ಝಾ ತೋರಿಸಿದ್ದಾರೆ. ಇಂತಹುದೇ ಚಿತ್ರವನ್ನು ಚರ್ಚ್ ಅಥವಾ ಮದ್ರಸಾ ಕುರಿತಂತೆ ನಿರ್ಮಿಸುವ ಧೈರ್ಯ ಅವರಿಗಿದೆಯೇ? ಅವರು ಯಾರೆಂದು ಅಂದುಕೊಂಡಿದ್ದಾರೆ?,'' ಎಂದು  ಬಜರಂಗದಳ ನಾಯಕ ಸುಶೀಲ್ ಸುರ್ಹೇಲೆ ಪ್ರಶ್ನಿಸಿದ್ದಾರೆ.

"ಝಾ ಅವರಿಗೆ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಚಿತ್ರೀಕರಣಕ್ಕೆ ಅನುಮತಿಸಲಾಗಿತ್ತು, ಹಿಂದು ಧರ್ಮವನ್ನು ನಿಂದಿಸಲು ಅಲ್ಲ. ಸರಣಿಯ ಶೀರ್ಷಿಕೆ ಬದಲಾಯಿಸಲಾಗುವುದೆಂದು ಭರವಸೆ ನೀಡಲಾಗಿದೆ. ನಂತರ ನಮ್ಮ ನಿಲುವನ್ನು ನಿರ್ಧರಿಸುತ್ತೇವೆ, ನಾವು ಬಾಬ್ಬಿ ಡಿಯೋಲ್ ಅವರಿಗೆ ಹುಡುಕುತ್ತಿದ್ದೇವೆ. ಅವರು ತಮ್ಮ ಸಹೋದರ (ಸನ್ನಿ ಡಿಯೋಲ್) ಅವರಿಂದ ಕಲಿಯಬೇಕು. ಅವರು ದೇಶಭಕ್ತಿಯ ಚಿತ್ರಗಳನ್ನು ಮಾಡಿದ್ದಾರೆ,'' ಎಂದೂ ಆತ ಹೇಳಿದ್ದಾರೆ.

ಘಟನೆ ಸಂಬಂಧ ಪ್ರಕಾಶ್ ಝಾ ಇನ್ನಷ್ಟೇ ದೂರು ದಾಖಲಿಸಬೇಕಿದೆ. ಆದರೆ ನಾಲ್ಕು ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಬಂಧಿಸಲಾಗಿದೆ ಎಂದು ಡಿಐಜಿ ಇರ್ಷಾದ್ ವಾಲಿ ಹೇಳಿದ್ದಾರೆ.

ಈ ವೆಬ್ ಸರಣಿಯಲ್ಲಿ ಬಾಬ್ಬಿ ಡಿಯೋಲ್, ಅದಿತಿ ಪೋಹನ್ಕರ್, ತ್ರಿಧಾ ಚೌಧುರಿ ಮತ್ತಿತರರು ನಟಿಸುತ್ತಿದ್ದಾರೆ. ಈ ಸರಣಿಯಲ್ಲಿ ಬಾಬ್ಬಿ ಡಿಯೋಲ್ ಗುರು ಪಾತ್ರ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News