ಪುತ್ತೂರು: ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದಿಂದ ಅಮರಣಾಂತ ಉಪವಾಸ ಧರಣಿ

Update: 2021-10-25 10:19 GMT

ಪುತ್ತೂರು, ಅ.25: ನೌಕರರ ಸಂಬಳ, ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಸೇರಿಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಸ್ಥೆಯ ಕೇಂದ್ರ ಕಚೇರಿ ಅಧಿಕಾರಿಗಳ ವಿರುದ್ಧ ಸರದಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಜ್ದೂರ್ ಸಂಘ, ಪುತ್ತೂರು ವಿಭಾಗವು ಸೋಮವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದೆ.

ಪುತ್ತೂರು ಮಿನಿವಿಧಾನ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಅ.21ರಿಂದ 23ರ ತನಕ ಮಜ್ದೂರ್ ಸಂಘದ ವತಿಯಿಂದ ಸರಣಿ ಧರಣಿ ನಡೆಸಲಾಗಿತ್ತು. ಇಂದಿನಿಂದ ಅಮರಣಾಂತ ಉಪವಾಸ ಧರಣಿ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಜ್ದೂರ್ ಸಂಘದ ಅಧ್ಯಕ್ಷ ನ್ಯಾಯವಾದಿ ಗಿರೀಶ್ ಮಳಿ, ಕೆಎಸ್ಸಾರ್ಟಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸಮರ್ಪಕವಾಗಿ ವೇತನ ಪಾವತಿಯಾಗುತ್ತಿಲ್ಲ. ನಿವೃತ್ತ ಸಿಬ್ಬಂದಿಗೆ ಹಾಗೂ ಸ್ವಯಂ ನಿವೃತ್ತಿ ಪಡೆದುಕೊಂಡಿರುವ ನೌಕರರಿಗೆ ಗ್ಯಾಚ್ಯುಟಿ ನೀಡದೆ ಸಂಕಷ್ಟಕ್ಕೆ ದೂಡಲಾಗಿದೆ. ನೌಕರರ ಬಗ್ಗೆ ನ್ಯಾಯಯುತವಾಗಿ ಧರಣಿ ನಡೆಸುತ್ತಿರುವ ನಮ್ಮ ಮೇಲೆ ಕೆಎಸ್ಸಾರ್ಟಿಸಿ ಹಿಂಬಾಗಿಲಿನ ಮೂಲಕ ಪಿತೂರಿ ನಡೆಸುತ್ತಿದ್ದು, ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಸಂಘದ ಸದಸ್ಯರು ಕೆಎಸ್ಸಾರ್ಟಿಸಿ ವಿಭಾಗ ಕಚೇರಿಯ ಬಳಿ ಮುಷ್ಕರ ನಡೆಸಲು ಬಾರದಂತೆ ನ್ಯಾಯಾಲಯದಲ್ಲಿ ನಿರ್ಬಧಕಾಜ್ಞೆಯನ್ನು ತಂದಿರುತ್ತಾರೆ. ಸಂಸ್ಥೆಯು ನೌಕರರ ಸೇವೆ ಮತ್ತು ಹೋರಾಟವನ್ನು ನಗಣ್ಯವಾಗಿ ಪರಿಗಣಿಸಿದೆ. ನ್ಯಾಯ ಸಿಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ. ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ತಿಳಿಸಿದರು.

 ಪುತ್ತೂರು ಘಟಕದ ಅಧ್ಯಕ್ಷ ವಿಶ್ವನಾಥ ರೈ ಮಾಡಾವು ಮಾತನಾಡಿ, ಸಂಘದ ಸಂಸ್ಥೆಯ ಸೇವೆಯಲ್ಲಿರುವ 9 ಮಂದಿ ನೌಕರರು ಹಾಗೂ ಓರ್ವ ನಿವೃತ್ತ ನೌಕರ ಸೇರಿಂತೆ ಒಟ್ಟು 10 ಮಂದಿ ಸದ್ಯ ಅಮರಣಾಂತ ಉಪವಾಸ ನಡೆಸಲಿದ್ದಾರೆ ಎಂದರು.

ಸಂಘದ ಪ್ರಧಾನ ವಕ್ತಾರ ಶಾಂತಾರಾಮ ವಿಟ್ಲ ಮಾತನಾಡಿ, ಉಪವಾಸನಿರತರಿಗೆ ಯಾವುದೇ ಸಮಸ್ಯೆಯಾದಲ್ಲಿ ಅದಕ್ಕೆ ಕೇಂದ್ರ ಕಚೇರಿಯ ಅಧಿಕಾರಿಗಳು ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು.

ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಸದಸ್ಯರಾದ ಸಂಸ್ಥೆಯ ಚಾಲಕರು, ನಿರ್ವಾಹಕರು, ನಿವೃತ ಸಿಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯಾದ ಶಾಂತರಾಮ ವಿಟ್ಲ, ಸಂಜೀವ ಗೌಡ, ಮಹಾಬಲ ಗಡಿಮಾರ್, ಅಶೋಕ್ ಭಟ್, ರಾಮಕೃಷ್ಣ ಜಿ., ಶ್ರೀಧರ್ ಭೂಸಾರೆ, ವಾಸುದೇವ ಪ್ರಭು, ಜಗದೀಶ ಕುಂಬಾರ, ಸತ್ಯನಾರಾಯಣ ಡಿ., ದೇವಾನಂದ ವಿಟ್ಲ ಉಪವಾಸ ಸತ್ಯಾಗ್ರಹ ನಿರತರಾಗಿದ್ದಾರೆ.

ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ್ ರೈ ಧರಣಿಗೆ ಚಾಲನೆ ನೀಡಿದರು. ಈ ಸಂದರ್ಭ ಪ್ರಮುಖರಾದ ರಾಮಚಂದ್ರ ಅಡಪ, ವೆಂಕಟರಮಣ ಭಟ್, ಮಹಾಲಿಂಗೇಶ್ವರ ಭಟ್, ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News