ಆರೋಪಿ ಆರೆಸ್ಸೆಸ್ ಮುಖಂಡ ನಾರಾಯಣ ರೈ ಬಂಧಿಸಿ ಸಮಗ್ರ ತನಿಖೆಗೆ ದ.ಕ.ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಒತ್ತಾಯ

Update: 2021-10-25 12:43 GMT

ಮಂಗಳೂರು, ಅ.25: ಪುತ್ತೂರು ತಾಲೂಕಿನ ಗ್ರಾಮವೊಂದರಲ್ಲಿ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಿ ಬಾಲಕಿಗೆ ನ್ಯಾಯ ದೊರಕುವವರೆಗೆ ಹೋರಾಟ ನಡೆಸುವುದಾಗಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತ ಬಾಲಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವ ದೂರಿನಲ್ಲಿ ತನ್ನ ಜತೆ ಅಕ್ರಮ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿ ಮಾಡಿ ತಾನು ಮಗುವಿಗೆ ಜನ್ಮ ನೀಡಲು ಕಾರಣವಾದ ನಾರಾಯಣ ರೈ ಎಂಬಾತನ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಈ ಕುರಿತು ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪ್ರಕರಣದಲ್ಲಿ ನೈಜ ಆರೋಪಿ, ಆರೆಸೆಸ್ಸ್ ಮುಖಂಡ ನಾರಾಯಣ ರೈ ಎಂಬಾತನನ್ನು ರಕ್ಷಿಸಲು ಕಾಣದ ಕೈಗಳ ಒತ್ತಡದ ಮೇರೆಗೆ ಪೊಲೀಸರು, ಲೇಡಿಗೋಶನ್ ವೈದ್ಯಾಧಿಕಾರಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಅವರು ಅಪಾದಿಸಿದರು.

ಸಂತ್ರಸ್ತ ಬಾಲಕಿ ತನ್ನ ಕುಟುಂಬಕ್ಕೆ ಆಧಾರವಾಗಬೇಕು ಎಂಬ ನಿಟ್ಟಿನಲ್ಲಿ ಭೂಮಾಲಕ ನಾರಾಯಣ ರೈ ಎಂಬವರ ಮನೆಯಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ ಬೆದರಿಸಿ ಅತ್ಯಾಚಾರಗೈಯ್ಯಲಾಗಿದೆ. ಬಳಿಕ ಅದನ್ನು ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕಿದ್ದಲ್ಲದೆ, ಈ ಸಂಬಂಧ 2021ರ ಸೆಪ್ಟಂಬರ್ 5ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿಯ ಹೇಳಿಕೆ ತನ್ನದಲ್ಲ. ಸಹಿ ಕೂಡಾ ತನ್ನದಲ್ಲ ಎಂದು ಬಾಲಕಿ ಹೇಳಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಸಹೋದರ ಸಂಬಂಧಿ ಅಣ್ಣನನ್ನು ಬಂಧಿಸಿದ್ದು ಆತ ನಿರಪರಾಧಿ, ಪೊಲೀಸ್ ಠಾಣೆಯಲ್ಲಿ ಮಾತ್ರವಲ್ಲದೆ, ಮ್ಯಾಜಿಸ್ಟ್ರೇಟ್ ಎದುರಿನಲ್ಲಿಯೂ ತಾನು ಆರೋಪಿ ನಾರಾಯಣ ರೈ ಹೆಸರು ಹೇಳಿರುವುದಾಗಿ ಬಾಲಕಿ ತಿಳಿಸಿದ್ದಾರೆ.

ಇದೀಗ ಬಾಲಕಿಯು ನೈಜ ಆರೋಪಿಯೆಂದು ಹೆಸರಿಸಿರುವ ನಾರಾಯಣ ರೈ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಾಮೀನು ಅರ್ಜಿ ಕೂಡ ಹಾಕಿದ್ದು, ಅದು ತಿರಸ್ಕೃತಗೊಂಡಿದೆ. ಹೀಗಿರುವಾಗ ಅತ್ಯಾಚಾರ, ದಲಿತ ದೌರ್ಜನ್ಯ, ಪೋಕ್ಸೋ ಪ್ರಕರಣದಡಿ ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು. ಆರೋಪಿಯನ್ನು ಡಿಎನ್‌ಎ ಪರೀಕ್ಷೆಗೊಪಡಿಸಬೇಕು. ಅ. 28ರೊಳಗೆ ಆರೋಪಿ ನಾರಾಯಣ ರೈ ಬಂಧನವಾಗದಿದ್ದರೆ, ದಲಿತ ಸಮನ್ವಯ ಸಂಘಟನೆಗಳ ನೇತೃತ್ವದ ಹೋರಾಟಕ್ಕೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕೂಡಾ ಬೆಂಬಲ ಸೂಚಿಸಲಿದೆ. ಬಾಲಕಿಗೆ ನ್ಯಾಯ ದೊರೆಯುವವರೆಗೆ ಹೋರಾಟ ನಡೆಸಲಿದೆ ಎಂದು ಲುಕ್ಮಾನ್ ಬಂಟ್ವಾಳ ಹೇಳಿದರು.

ಗೋಷ್ಠಿಯಲ್ಲಿ ಶೈಲಜಾ ಅಮರನಾಥ್, ಅಭೀಷೇಕ್ ಬೆಳ್ಳಿಪಾಡಿ, ರಮಾನಂದ ಬೋಳಾರ, ಶಾಂತಲಾ ಗಟ್ಟಿ, ಸೌಹನ್, ಬಾಲಕೃಷ್ಣ ಆನಂದ ಬೆಳ್ಳಾರೆ, ಕೇಶವ ಪಡೀಲ್, ಕೃತಿ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News