ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೆಂಬ ಫಾರೂಕ್ ಅಬ್ದುಲ್ಲಾ ಸಲಹೆಗೆ ಅಮಿತ್ ಶಾ ತಿರುಗೇಟು

Update: 2021-10-25 13:01 GMT

ಶ್ರೀನಗರ: ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದ ಹೊರತು ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸದು ಎಂಬ  ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿಕೆಯ ವಿರುದ್ಧ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ವಾಗ್ದಾಳಿ ನಡೆಸಿದ್ದು, ಜಮ್ಮು -ಕಾಶ್ಮೀರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಸರಕಾರವು ಜಮ್ಮು- ಕಾಶ್ಮೀರದ ಯುವಕರೊಂದಿಗೆ ಮಾತನಾಡುತ್ತದೆ ಎಂದು ಹೇಳಿದ್ದಾರೆ.

"ಪಾಕಿಸ್ತಾನದೊಂದಿಗೆ ಸರಕಾರ ಮಾತುಕತೆ ನಡೆಸಬೇಕು ಎಂದು ಫಾರೂಕ್ ಅಬ್ದುಲ್ಲಾ ಅವರು ಸಲಹೆ ನೀಡಿದ್ದಾರೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಅವರಿಗೆ ಅವರ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ನಾವು ಕಾಶ್ಮೀರಿ ಯುವಕರೊಂದಿಗೆ ಮಾತನಾಡುತ್ತೇವೆಯೇ ಹೊರತು ಪಾಕಿಸ್ತಾನದೊಂದಿಗಲ್ಲ" ಎಂದು ಶಾ ಇಲ್ಲಿ ಎಸ್‌ಕೆಐಸಿಸಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

" ಕಾಶ್ಮೀರ, ಜಮ್ಮು ಮತ್ತು ಹೊಸದಾಗಿ ರಚಿಸಲಾದ ಲಡಾಖ್ (ಕೇಂದ್ರಾಡಳಿತ ಪ್ರದೇಶ) ಅನ್ನು ಅಭಿವೃದ್ಧಿಯ ಪಥದಲ್ಲಿ ಇರಿಸುವ ಏಕೈಕ ಉದ್ದೇಶದಿಂದ ಆರ್ಟಿಕಲ್ 370 ನ್ನು ರದ್ದುಗೊಳಿಸಲಾಗಿದೆ. 2024 ರ ವೇಳೆಗೆ ನಮ್ಮ ಪ್ರಯತ್ನಗಳ ಫಲವನ್ನು ನೀವು ನೋಡುತ್ತೀರಿ" ಎಂದು ಅವರು ಹೇಳಿದರು.

ಇಸ್ಲಾಮಾಬಾದ್ ಹಾಗೂ  ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆಯನ್ನು ಪ್ರತಿಪಾದಿಸುವವರು  ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಏನು ಅಭಿವೃದ್ಧಿ ಮಾಡಿದೆ ಎಂದು ಕೇಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News