ಡಾ.ಪ್ರಭಾಕರ ಜೋಶಿಗೆ ಸದಾನಂದ ಪ್ರಶಸ್ತಿ ಪ್ರದಾನ

Update: 2021-10-25 13:06 GMT

ಸಾಸ್ತಾನ, ಅ.25: ಕಲಿಸುವ ಗುರು ಹಾಗೂ ಕಲಾಕೇಂದ್ರಗಳಿಗೆ ಸರಕಾರಗಳು ಹೆಚ್ಚಿನ ಪ್ರಾಶಸ್ತ್ಯ ನೀಡಿ ಕಲಾ ಕೇಂದ್ರಗಳಿಗೆ ಆರ್ಥಿಕ ಧನ ಸಹಾಯ ಮಾಡಬೇಕು ಎಂದು ಯಕ್ಷಗಾನ ವಿದ್ವಾಂಸ, ವಿಮರ್ಶಕ ಮಂಗಳೂರಿನ ಡಾ.ಪ್ರಭಾಕರ ಜೋಶಿ ಹೇಳಿದ್ದಾರೆ.

ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾ ಕೇಂದ್ರದಲ್ಲಿ ರವಿವಾರ ಕೇಂದ್ರದ ಸಂಸ್ಥಾಪಕ, ಯಕ್ಷಗುರು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಮುಖ್ಯೋಪಾಧ್ಯಾಯ ಐರೋಡಿ ಸದಾನಂದ ಹೆಬ್ಬಾರರ ನೆನಪಿನಲ್ಲಿ ಪ್ರತೀವರ್ಷ ನೀಡಲಾಗುವ ಸದಾನಂದ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕನ್ನಡ ಭಾಷೆಯೊಂದಿಗೆ ಕಲೆಯನ್ನು ಉಳಿಸುವ ಪ್ರಯತ್ನ ನಡೆಯಬೇಕು. ಕಲೆಯ ಪ್ರೋತ್ಸಾಹಕ್ಕೆ ಶೈಕ್ಷಣಿಕ ಬುನಾದಿ ಅತೀ ಅಗತ್ಯ. ಕೇಂದ್ರಗಳ ಸ್ಥಾಪನೆಯ ಬಗ್ಗೆ ರಾಜಕಾರಣಿಗಳು ಪ್ರಯತ್ನ ಪಡಬೇಕು ಎಂದು ಡಾ.ಜೋಶಿ ಅವರು ಅಭಿಪ್ರಾಯ ಪಟ್ಟರು.

ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ್ ಭಟ್ ಅಭಿನಂದನೀಯ ಭಾಷಣ ಮಾಡಿ ಯಕ್ಷಗಾನದಲ್ಲಿ ಶಾಸ್ತ್ರೀಯವಾಗಿ ಪಳಗಿದ ಡಾ. ಜೋಶಿ ಅಂತಹವರಿಗೆ ಪದ್ಮಶ್ರೀ ಪ್ರಶಸ್ತಿ ಅರಸಿ ಬರಬೇಕು. ಕಲೆಯ ಒಳಗಿದ್ದು, ಕಲೆಯನ್ನು ಆಸ್ವಾದಿಸಿ, ಕಲೆಯನ್ನು ವಿಸ್ತರಿಸಿದ ಜೋಶಿ ಅವರಿಗೆ ಯೋಗ್ಯತೆ ಇದ್ದರೂ ಅಕಾಡೆಮಿಯ ಅಧ್ಯಕ್ಷ ಸ್ಥಾನ ದೊರಕದಿರುವುದು ವಿಷಾಧನೀಯ ಎಂದರು.

ಪತ್ರಕರ್ತ ಅಂಬರೀಷ್ ಭಟ್, ಸದಾನಂದ ಹೆಬ್ಬಾರರ ಸಂಸ್ಮರಣೆ ಮಾಡಿ ಕಲೆಯ ಮೂಲ ಸ್ವರೂಪ ವಿರೂಪಗೊಳಿಸದೇ ಸಾಂಪ್ರದಾಯಿಕ ಕಲೆಯನ್ನು ಉಳಿಸುವ ಪ್ರಯತ್ನ ಸದಾನಂದ ಹೆಬ್ಬಾರರಿಂದ ಆಗಿದೆ ಎಂದರು.

ಕಲಾ ಕೇಂದ್ರದ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉದ್ಯಮಿ ಗೋವಿಂದ ಬಾಬುಪೂಜಾರಿ, ನರಸಿಂಹ ಹೆಬ್ಬಾರ್, ಸುಚೇತಾ ಜೋಶಿ ಉಪಸ್ಥಿತರಿದ್ದರು.

ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಮೇಘ ಶ್ಯಾಮ ಹೆಬ್ಬಾರ್ ಸನ್ಮಾನ ಪತ್ರ ವಾಚಿಸಿದರು. ರಾಮಚಂದ್ರ ಐತಾಳ ವಂದಿಸಿ ಪ್ರಭಾಕರ ಐತಾಳ ಬಸ್ರೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News