ಗುರುಪುರ: ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದ ಶಾಲೆ ಪುನರಾರಂಭ

Update: 2021-10-25 13:57 GMT

ಮಂಗ:ಳೂರು, ಅ.25: ಮಕ್ಕಳ ಕೊರತೆಯಿಂದಾಗಿ ಕೆಲವು ವರ್ಷಗಳ ಹಿಂದೆ ಮುಚ್ಚಲಾಗಿದ್ದ ಗುರುಪುರ ನಡುಗುಡ್ಡೆಯ ದ.ಕ.ಜಿ.ಪಂ.ಕಿ.ಪ್ರಾ ಶಾಲೆಯು ಸೋಮವಾರ ಪುನರಾರಂಭಗೊಂಡಿತು. ಗುರುಪುರ ಸರಕಾರಿ ಪ್ರೌಢಶಾಲೆಗೆ ಸ್ಥಳಾಂತರಗೊಂಡ ಈ ಶಾಲೆಗೆ 1ರಿಂದ 5ನೇ ತರಗತಿಯ ಮಕ್ಕಳು ಭಾರೀ ಉತ್ಸಾಹದಿಂದ ಹಾಜರಾದರು.

ಶಿಕ್ಷಣ ಇಲಾಖೆಯ ಪ್ರಸಕ್ತ ಆದೇಶದಂತೆ ಈ ಹಿಂದೆ ಮುಚ್ಚಲಾದ ಶಾಲೆ ಪುನರಾರಂಭಿಸಲು ಪ್ರಾಥಮಿಕ ಶಾಲೆಯಲ್ಲಿ 10ಕ್ಕಿಂತ ಅಧಿಕ ವಿದ್ಯಾರ್ಥಿಗಳ ದಾಖಲಾತಿಬೇಕು. ಅಲ್ಲದೆ ಪಾಲಕರ ಒಪ್ಪಿಗೆ ಪತ್ರವೂ ಬೇಕು ಎಂದು ದ.ಕ.ಜಿಲ್ಲಾ ಡಿಡಿಪಿಐ ಮಲ್ಲೇಸ್ವಾಮಿ ಸೂಚಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಗುರುಪುರ ಗ್ರಾಪಂ ಸದಸ್ಯರಾದ ಜಿ.ಎಂ. ಉದಯ ಭಟ್ ಮತ್ತು ಸಚಿನ್ ಅಡಪ 18 ಮಕ್ಕಳನ್ನು ಪ್ರಾಥಮಿಕ ಶಾಲೆಯ ತರಗತಿಗಳಿಗೆ ಸೇರಿಸಲು ಶ್ರಮಿಸಿದ್ದರು. ಇವರಿಗೆ ಗುರುಪುರ ಸರಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಕಾವ, ಸರಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶವಂತ ಆಳ್ವ, ಶಾಲಾ ಮುಖ್ಯಶಿಕ್ಷಕಿ ರೂಪಾ ಡಿ,, ಪ್ರಾಂಶುಪಾಲ ಚಂದ್ರಶೇಖರ್ ಸಹಕರಿಸಿದ್ದರು.

ಶಿಕ್ಷಣ ಇಲಾಖೆಯ ಗಂಜಿಮಠ-ಬದ್ರಿಯಾ ನಗರ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಶೀಲಾವತಿ ಸೋಮವಾರ ಹೊಸ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News