ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ್ ಗ್ಯಾಸ್ ಲಾರಿ ಚಾಲಕರಿಂದ ಧರಣಿ

Update: 2021-10-25 14:08 GMT

ಮಂಗಳೂರು, ಅ.25: ಕಿಲೋ ಮೀಟರ್‌ಗೆ 7 ರೂ. ವೇತನ, ಬಿಪಿಸಿಎಲ್ ಘಟಕ ಹಾಗೂ ಗ್ಯಾಸ್ ಏಜನ್ಸಿಗಳ ಸಂಗ್ರಾಹಾರದಲ್ಲಿ ಚಾಲಕರಿಗೆ ವಿಶ್ರಾಂತಿ ತಾಣ, ಸಮಯಕ್ಕೆ ಸರಿಯಾಗಿ ಬಿಲ್ಲಿಂಗ್ ವ್ಯವಸ್ಥೆ ಸಹಿತ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಪಿಸಿಎಲ್ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಗಳ ಚಾಲಕರು ಸೋಮವಾರ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಿಪಿಸಿಎಲ್ ಘಟಕದ ಎದುರು ಧರಣಿ ನಡೆಸಿದರು.

ಸಿಐಟಿಯು ಸಂಯೋಜಿತ ಭಾರತ್ ಗ್ಯಾಸ್ ಲಾರಿ ಚಾಲಕರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯನ್ನು ಉದ್ದೇಶಿಸಿ ಮಾತಾಡಿದ ಸಿಐಟಿಯು ಮುಖಂಡ ವಸಂತ ಆಚಾರಿ 'ಅಗತ್ಯ ಸೇವೆಯಾದ ಗ್ಯಾಸ ಸಿಲಿಂಡರ್ ಸಾಗಣೆ ಲಾರಿ ಚಾಲಕ ವೃತ್ತಿ ಅತ್ಯಂತ ಜವಾಬ್ದಾರಿಯುತ ವೃತ್ತಿಯಾಗಿದ್ದು, ಅದರ ಚಾಲಕರಿಗೆ ನ್ಯಾಯಯುತವಾದ ಸಮಲತ್ತು, ಹಕ್ಕುಗಳನ್ನು ಖಾತರಿ ಪಡಿಸುವುದು ಬಿಪಿಸಿಎಲ್ ಆಢಳಿತದ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಚಾಲಕರು ಹಲವು ಬಾರಿ ಬೇಡಿಕೆ ಮುಂದಿಟ್ಟರೂ ಬಿಪಿಸಿಎಲ್ ಆಡಳಿತ ಪರಿಗಣಿಸದಿರುವುದು ವಿಷಾದನೀಯ' ಎಂದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತಾಡಿ ಚಾಲಕರ ಬೇಡಿಕೆಗಳು ನ್ಯಾಯಯುತವಾಗಿದೆ. ಕಂಪೆನಿ ಹಾಗು ಟ್ರಾನ್ಸ್ ಪೋರ್ಟ್ ಮಾಲಕರು ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕು. ಬೆಲೆಯೇರಿಕೆಯ ಈ ದಿನಗಳಲ್ಲಿ ವೇತನವನ್ನು ಪರಿಷ್ಕರಿಸಲು ಹಿಂದೇಟು ಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ. ಹೊರ ರಾಜ್ಯಗಳ ಟ್ರಕ್ ಚಾಲಕರಿಗೆ ಸಿಗುವ ವೇತನ, ಹಕ್ಕುಗಳನ್ನು ಸ್ಥಳೀಯ ಚಾಲಕರಿಗೆ ನೀಡದೆ ತಾರತಮ್ಯ ಎಸಗುವುದು ಸರಿಯಲ್ಲ. ಬೇಡಿಕೆ ಈಡೇರದಿದ್ದರೆ ಅನಿರ್ಧಿಷ್ಟ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ಯೂನಿಯನ್ ಪದಾಧಿಕಾರಿಗಳಾದ ಸುರೇಶ್, ಮುಹಮ್ಮದ್ ತಾಹಿರ್, ಫಾರೂಕ್, ಶೇಖರ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು. ಭಾರತ್ ಗ್ಯಾಸ್ ಲಾರಿ ಚಾಲಕರ ಸಂಘದ ಅಧ್ಯಕ್ಷ ದಯಾನಂದ ಸಾಲ್ಯಾನ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ನಾಸಿರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News