ನ್ಯಾಯ ಕೇಳುವ ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸುವ ಕಾರ್ಯವನ್ನು ಸರಕಾರ ನಿಲ್ಲಿಸಬೇಕು: ವಸಂತ ಬಂಗೇರ

Update: 2021-10-25 14:24 GMT

ಬೆಳ್ತಂಗಡಿ; ನ್ಯಾಯ ಕೇಳುವ ಜನರ ಮೇಲೆ ದೇಶದ್ರೋಹದ ಆರೋಪಹೊರಿಸುವ ಕಾರ್ಯವನ್ನು ಸರಕಾರ ನಿಲ್ಲಿಸಬೇಕು. ವಿಠಲ ಮಲೆಕುಡಿಯ ಪ್ರಕರಣದಲ್ಲಿ ಸರಕಾರಕ್ಕೆ ಮುಖಭಂಗವಾಗಿದ್ದು ಇನ್ನಾದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳಲಿ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಹೇಳಿದರು.

ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಕ್ಸಲ್ ಆರೋಪದಿಂದ ದೋಷಮುಕ್ತರಾದ ವಿಠಲ ಮಲೆಕುಡಿಯ ಹಾಗೂ ಲಿಂಗಣ್ಣ ಮಲೆಕುಡಿಯ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಹಿರಿಯ ಕಮ್ಯೂನಿಸ್ಟ್ ಮುಖಂಡ ಬಿ.ಎಂ ಭಟ್ ಮಾತನಾಡಿ ವಿಠಲ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿ ಇಡೀ ಆದಿವಾಸಿ ಸಮುದಾಯವನ್ನು ಧಮನಿಸುವ ಪ್ರಯತ್ನ ಮಾಡಿದ್ದರು ಆದರೆ ವಿಠಲ ಇದನ್ನು ಎಸುರಿಸಿ ನಿಂತು ಗೆದ್ದಿದ್ದಾರೆ. ನ್ಯಾಯಾಲಯದಲ್ಲಿ ಸತ್ಯಕ್ಕೆ ಗೆಲುವಾಗಿದೆ. ಆದಿವಾಸಿಗಳ ಪರವಾದ ಹೋರಾಟ ನಿರಂತರ ಮುಂದುವರಿಯಲಿದೆ ಎಂದರು.

ವಿಠಲ ಮಲೆಕುಡಿಯ ಮಾತನಾಡಿ ನ್ಯಾಯ ಕೇಳಿದ ನಮ್ಮನ್ನು  ಜೈಲಿಗೆ ಹಾಕಲು ಸರಕಾರ ಮುಂದಾಗಿತ್ತು, ಇದೀಗ ನಮಗೆ ನ್ಯಾಯ ದೊರೆತಿದೆ. ನ್ಯಾಯಾಲಯದ ಮೇಲೆ ದೇಶದ ಜನ ನಂಬಿಕೆಯಿಡುವಂತಾಗಿದೆ. ನಮಗೆ ಅನ್ಯಾಯವಾದಾಗ ನಮ್ಮ ಪರವಾಗಿ ನಿಂತು ಹೋರಾಟನಡೆಸಿ ನ್ಯಾಯಕೊಡಿಸಲು ಮುಂದಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿಠಲ ಮಲೆಕುಡಿಯ ಹಾಗೂ ಲಿಂಗಣ್ಣ ಮಲೆಕುಡಿಯ ಅವರನ್ನು ಮಾಜಿ ಶಾಸಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರುಗಳಾದ ಎಲ್. ಮಂಜುನಾಥ್, ಶ್ಯಾಮರಾಜ್ ಪಟ್ರಮೆ, ಈಶ್ವರಿ, ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News