‘ಕ್ರಿಯೆಗೆ ಪ್ರತಿಕ್ರಿಯೆ’ ಟ್ರೆಂಡ್ ಶುರುವಾದರೆ ರಾಜ್ಯದ ಪರಿಸ್ಥಿತಿ ವಿಷಯಸ್ಥಿತಿಗೆ

Update: 2021-10-25 15:35 GMT

ಮಂಗಳೂರು, ಅ.25: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ ರಾಜ್ಯವನ್ನು ರಕ್ಷಿಸುವ ಮುಖ್ಯಮಂತ್ರಿಯೇ ಕರಾವಳಿ ಯಲ್ಲಿ ಭಾವನೆಗಳಿಗೆ ಧಕ್ಕೆ ಬಂದಾಗ ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂಬ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನ ಒಪ್ಪುವ ಮಾತಲ್ಲ. ಇದೇ ಟ್ರೆಂಡ್ ಮುಂದುವರಿದಲ್ಲೇ ಆದಲ್ಲಿ ರಾಜ್ಯದ ಪರಿಸ್ಥಿತಿ ವಿಷಯಸ್ಥಿತಿಗೆ ತಲುಪಲಿದೆ ಎಂದು ದಲಿತ ಹೋರಾಟಗಾರ ಬಿ.ಆರ್. ಭಾಸ್ಕರ್ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಎಸ್‌ಡಿಪಿಐ ನೂತನ ಪದಾಧಿಕಾರಿಗಳ ಸಂವಿಧಾನ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಗೌರವದಿಂದ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಸಂವಿಧಾನವನ್ನು ಅಗೌರವಿಸಿ, ವ್ಯಂಗ್ಯ ಮಾಡುವ ಕೆಲಸವು ದೇಶದ್ರೋಹದ ಕೃತ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಂತಿ ಕದಡುವ ಕೃತ್ಯ ಎಸಗಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಎನ್ನುವುದು ಎಲ್ಲಿಗೆ ಹೋಗಿ ಮುಟ್ಟಲಿದೆ ಎನ್ನುವುದನ್ನು ಅಂದಾಜಿಸಲು ಕೂಡ ಅಸಾಧ್ಯ ಎಂದರು.

ಕಂಬಾಲಪಲ್ಲಿಯಲ್ಲಿ ಏಳು ದಲಿತರ ಸಜೀವ ದಹನ ಪ್ರಕರಣ, ಶಹಾಪುರದಲ್ಲಿ ದಲಿತ ಯುವತಿಯ ಬೆತ್ತಲೆಗೊಳಿಸಿ ಹಲ್ಲೆಗೈದ ಪ್ರಕರಣ, ತುಮಕೂರು ದಲಿತ ಕೃಷಿಕನ ಮನೆಗೆ ಬೆಂಕಿ ಹಚ್ಚಿದ ಪ್ರಕರಣಗಳು ಸಂಭವಿಸಿದಾಗ ದಲಿತರು ಕೂಡ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹಿನ್ನೆಲೆಯಲ್ಲಿ ಮುಂದಾಗಿದ್ದರೆ ಇಡೀ ರಾಜ್ಯ ಹೊತ್ತಿ ಉರಿಯುತ್ತಿತ್ತು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತುಗಳನ್ನು ಸುಸಂಸ್ಕೃತ ಸಮಾಜ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸಿಎಂ ಮಾತಿನ ಅರ್ಥ ಉದ್ರಿಕ್ತರು ಕಾನೂನು ಮೀರಿ ಬೀದಿಗಿಳಿಯಬೇಕು ಎನ್ನುವುದೇ? ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯ ಹೇಳಿಕೆಯಿಂದ ನಾಡು ದೇಶದ ಮುಂದೆ ತಲೆ ತಗ್ಗಿಸುವಂತಾಗಿದೆ. ಸಿಎಂ ಸಂಘಪರಿವಾರದ ಹಿಂಬಾಲಕ ರಾದರೂ ಆಗಲಿ. ಚಡ್ಡಿ, ಪ್ಯಾಂಟ್ ಬೇಕಾದರೂ ಧರಿಸಲಿ, ಇಷ್ಟ ಬಂದದ್ದು ಮಾಡಲಿ. ಆದರೆ ಸಂವಿಧಾನಬದ್ಧ ಹುದ್ದೆಯಲ್ಲಿದ್ದಾಗ ಗೌರವದಿಂದ ನಡೆದುಕೊಳ್ಳುವುದನ್ನು ಮುಖ್ಯಮಂತ್ರಿ ಕಲಿತುಕೊಳ್ಳಲಿ ಎಂದು ತಾಕೀತು ಮಾಡಿದರು.

ತ್ರಿಶೂಲ ದೀಕ್ಷೆ ಪೈಶಾಚಿಕ ಕೃತ್ಯದ ಹುನ್ನಾರವಾಗಿದೆ. ಆ ದೀಕ್ಷೆಗೆ ಸೆಡ್ಡು ಹೊಡೆಯುವ ದೀಕ್ಷೆ ಇದಲ್ಲ. ಯಾರಿಗೂ ಸೆಡ್ಡು ಹೊಡೆಯುವ ಅಗತ್ಯವಿಲ್ಲ. ನಾವು ದೇಶವನ್ನು ಗೌರವಿಸುವ ಕೆಲಸ ಮಾಡೋಣ, ಸ್ನೇಹ ಬೆಳೆಸೋಣ. ಇಲ್ಲಿನ ಭ್ರಾತೃತ್ವಕ್ಕೆ ಅಪಾಯಕಾರಿಯಾಗಿ ಯಾರು ಕೆಲಸ ಮಾಡುತ್ತಾರೋ ಅಂತಹವರ ಪಕ್ಕ ಸುಳಿಯುವುದೂ ಇಲ್ಲ. ಭ್ರಾತೃತ್ವ, ಸಮಾನತಾವಾದವನ್ನು ಗೌರವಿಸುವುದು ಎಸ್‌ಡಿಪಿಐನ ಸಂವಿಧಾನ ದೀಕ್ಷೆಯ ಉದ್ದೇಶ ಎಂದರು.

ಎಸ್‌ಡಿಪಿಐ ಜಿಲ್ಲಾ ನೂತನ ಅಧ್ಯಕ್ಷ ಅಬೂಬಕರ್ ಕುಳಾಯಿ ಮಾತನಾಡಿ, ತ್ರಿಶೂಲ ದೀಕ್ಷೆ ಸಮಯದಲ್ಲಿ ನಾಗರಿಕರು, ಜಾತ್ಯತೀತ ಪಕ್ಷಗಳು ಖಂಡಿಸಬಹುದಾಗಿತ್ತು. ಆದರೆ ಯಾರೂ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಇಂತಹ ಕೃತ್ಯವನ್ನು ಖಂಡಿಸಿದ ಪಕ್ಷ, ಸಂಘಟನೆ ಇದ್ದರೆ ಅದು ಎಸ್‌ಡಿಪಿಐ ಮಾತ್ರ. ಆಯುಧ ಪೂಜೆ ಹಿಂದೂ ಧರ್ಮದ ಆಚರಣೆಯಾಗಿದೆ. ಅದನ್ನು ನಾವು ಗೌರವಿಸುವೆವು. ಆದರೆ ತಲವಾರು, ತ್ರಿಶೂಲ ದೀಕ್ಷೆ ಮಾಡಬೇಕೆಂಬುದು ಎಲ್ಲಿಯೂ ದಾಖಲಾಗಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕ್, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿಯ ಸದಸ್ಯ ರಿಯಾಝ್ ಫರಂಗಿಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ಪ್ರಮುಖರಾದ ಜಲೀಲ್ ಕೃಷ್ಣಾಪುರ, ಮಿಶ್ರಿಯಾ ಕಣ್ಣೂರು, ಅಥಾವುಲ್ಲಾ ಜೋಕಟ್ಟೆ, ಅಝರ್, ಮುಝಮ್ಮಿಲ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಎಸ್‌ಡಿಪಿಐ ನೂತನ ಪದಾಧಿಕಾರಿಗಳ ಸಂವಿಧಾನ ದೀಕ್ಷೆ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News