ಬೆಳ್ವೆ ಪ್ರತಿಭಟನೆ: ಉಡುಪಿ ಧರ್ಮಪ್ರಾಂತದ ಸ್ಪಷ್ಟೀಕರಣ

Update: 2021-10-25 16:22 GMT

ಉಡುಪಿ, ಅ.25: ಉಡುಪಿ ಜಿಲ್ಲೆಯ ಬೆಳ್ವೆ ಗುಮ್ಮಹೊಲದ ಸಂತ ಜೋಸೆಫ್ ಅಗ್ರಿಕಲ್ಚರ್ ಕಾಲನಿಯ ಜನರು ಚರ್ಚ್‌ನ ಧರ್ಮಗುರುಗಳ ವಿರುದ್ಧ ಅನೇಕ ಆರೋಪಗಳನ್ನು ಮಾಡಿ, ಅವರನ್ನು ತಕ್ಷಣ ಅಲ್ಲಿಂದ ವರ್ಗಾವಣೆ ಮಾಡ ಬೇಕೆಂಬ ಬೇಡಿಕೆಯಿಟ್ಟು ಮಾಡಿದ ಪ್ರತಿಭಟನಾ ವರದಿಗಳಲ್ಲಿ ಅನೇಕ ಸತ್ಯಕ್ಕೆ ದೂರವಾದ ವಿಷಯಗಳಿವೆ ಎಂದು ಉಡುಪಿ ಧರ್ಮಪ್ರಾಂತ ಪತ್ರಿಕೆಗಳಿಗೆ ನೀಡಿದ ಸ್ಪಷ್ಟೀಕರಣದಲ್ಲಿ ತಿಳಿಸಿದೆ.

ರವಿವಾರ ಚರ್ಚ್‌ನಲ್ಲಿ ಎಂದಿನಂತೆ ಬೆಳಗ್ಗಿನ ಪೂಜೆ ಸುಸೂತ್ರವಾಗಿ ನಡೆದು ಕ್ರೈಸ್ತ ಭಕ್ತಾದಿಗಳು ಅದರಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ, ಗೇಟ್‌ಗೆ ಬೀಗ ಜಡಿದು ಭಕ್ತಾದಿಗಳಿಗೆ ಚರ್ಚ್ ಪ್ರವೇಶಿಸದಂತೆ ತಡೆಯಲಾಯಿತು ಎಂಬುದು ವರದಿ ಸತ್ಯಕ್ಕೆ ದೂರವಾದುದು ಎಂದು ಅದು ಹೇಳಿದೆ.

2021 ಜುಲೈ ತಿಂಗಳಲ್ಲಿ ಬೆಳ್ವೆ ಕಾಲನಿಯ ಹೊಸ ನಿರ್ದೇಶಕರಾಗಿ ನೇಮಕ ಗೊಂಡ ಧರ್ಮಗುರುಗಳು ಇಕ್ಕಟ್ಟಾಗಿದ್ದ ತಮ್ಮ ಶೌಚಾಲಯ ಮತ್ತು ಕಚೇರಿ ಯನ್ನು ವಿಸ್ತರಿಸಲು ಧರ್ಮಪ್ರಾಂತದ ಬಿಷಪರ ಲಿಖಿತ ಅನುಮತಿ ಪಡೆದು, ಒಂದು ಗೋಡೆಯನ್ನು ಕೆಡವಿ, ಆ ಜಾಗದಲ್ಲಿ ಹೊಸ ಗೋಡೆಯನ್ನು ಕಟ್ಟಿಸಲು ಆರಂಭಿಸಿದ್ದರು. ಯಾವ ರೀತಿಯಲ್ಲೂ ಚರ್ಚ್ ಕಟ್ಟಡ ಅಥವ ಇತರ ಭಾಗಗಳಿಗೆ ಹಾನಿಯನ್ನು ಉಂಟುಮಾಡಿಲ್ಲ.

ಅ.5ರಂದು ಬೆಳ್ವೆಯ ಪ್ರತಿನಿಧಿಗಳು ಹಾಗೂ ಧರ್ಮಪ್ರಾಂತದ ಆಡಳಿತ ಮಂಡಳಿ ಉಡುಪಿ ಬಿಷಪರ ನಿವಾಸದಲ್ಲಿ ನಡೆಸಿದ ಸಭೆಯಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿಸಲಾಗಿತ್ತು. ಧರ್ಮಗುರುಗಳ ವರ್ಗಾವಣೆಯೊಂದನ್ನು ಬಿಟ್ಟು ಮಿಕ್ಕೆಲ್ಲಾ ಬೇಡಿಕೆಗಳನ್ನು ಕೈಬಿಟ್ಟಿರುವುದಾಗಿ ಬೆಳ್ವೆಯ ಪ್ರತಿನಿಧಿಳು ಲಿಖಿತವಾಗಿ ಮಾತುಕೊಟ್ಟಿದ್ದರು.

ಗುಮ್ಮಹೊಲ ಬೆಳ್ವೆಯ ಸಂತ ಜೋಸೆಫ್ ಅಗ್ರಿಕಲ್ಚರಲ್ ಕಾಲನಿಯ ಬೇಡಿಕೆಗೆ ಸಂಬಂಧಪಟ್ಟಂತೆ, ಯಾವುದೇ ಚರ್ಚಿಗೆ/ ಸಂಸ್ಥೆಗೆ/ಕಾಲನಿಗೆ ಗುರುಗಳನ್ನು/ನಿರ್ದೇಶಕರನ್ನು ನೇಮಿಸುವ ಅಥವಾ ವರ್ಗಾಯಿಸುವ ಪರಮಾಧಿಕಾರ ಧರ್ಮಪ್ರಾಂತದ ಮುಖ್ಯಸ್ಥರಾದ ಬಿಷಪರದು. ಕೆಥೋಲಿಕ ಧರ್ಮಸಭೆಯ ಹಾಗೂ ಧರ್ಮಪ್ರಾಂತದ ನೇಮ ನಿಯಮಗಳ ಪ್ರಕಾರ ಅದು ನಡೆಯುತ್ತದೆ. ಇದು ತಿಳಿದೂ ಬೆಳ್ವೆಯ ಕ್ರೈಸ್ತರು, ಕ್ರೈಸ್ತ ಸಮುದಾಯಕ್ಕೆ ಸಂಬಂಧಪಡದ ಜನರಿಗೆ ತಪ್ಪು ಮಾತಿಯನ್ನು ನೀಡಿ ಗುಂಪುಗೂಡಿಸಿ ಪ್ರತಿಭಟಿಸಿದ್ದು, ’ಕ್ರೈಸ್ತ ಧರ್ಮವನ್ನು ತ್ಯಜಿಸುತ್ತೇವೆ’ ಎಂಬ ಬೆದರಿಕೆ ಒಡ್ಡಿದ್ದು ನಿಜಕ್ಕೂ ವಿಷಾದನೀಯ ಎಂದು ಸ್ಪಷ್ಟೀಕರಣದಲ್ಲಿ ಹೇಳಲಾಗಿದೆ.

ಗುಮ್ಮಹೊಲ ಬೆಳ್ವೆಯ ಕ್ರೈಸ್ತ ವಿಶ್ವಾಸಿಗಳು ಚರ್ಚ್‌ಗೆ ಪ್ರವೇಶಿಸಲು, ಪ್ರಾರ್ಥನೆ-ಪೂಜೆಗಳಲ್ಲಿ ಭಾಗವಹಿಸಲು ಯಾರೂ ಯಾವತ್ತೂ ಅಡ್ಡಿ ಮಾಡಿಲ್ಲ. ಪ್ರಸ್ತುತ ಧರ್ಮಗುರುಗಳು ಏನಾದರೂ ಸೂಚನೆಗಳನ್ನು ನೀಡಿರುವುದಾದರೆ, ಅವು ಚರ್ಚ್‌ನ ಶಿಸ್ತು ಪಾಲನೆಯ ಭಾಗವಾಗಿವೆ. ಬೆಳ್ವೆ ಸಂತ ಜೋಸೆಫರ ಅಗ್ರಿಕಲ್ಚರಲ್ ಕಾಲನಿಯ ಕ್ರೈಸ್ತ ಭಕ್ತಾದಿಗಳು ಒಳಗಿನ ಮತ್ತು ಹೊರಗಿನ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವಕ್ಕೆ ಹಾಗೂ ಸುಳ್ಳು ಮಾಹಿತಿಗಳಿಗೆ ಬಲಿಯಾಗದೆ, ದೈನಂದಿನ ಕ್ರೈಸ್ತ ವಿಶ್ವಾಸಿ ಜೀವನವನ್ನು ನಡೆಸಬೇಕೆಂದು ಧರ್ಮಪ್ರಾಂತದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News