ಮಹಿಳೆಯರು ಸ್ವಯಂ ರಕ್ಷಣಾ ಕಲೆಯನ್ನು ಕಲಿಯುವುದು ಅಗತ್ಯವಾಗಿದೆ: ಡಾ. ಸವಿತಾ ಕಾಮತ್

Update: 2021-10-25 16:30 GMT

ಭಟ್ಕಳ: ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ದುರುಳರ ಕಿರುಕುಳಕ್ಕೆ ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ಅವರು ತಮ್ಮ ಆತ್ಮರಕ್ಷಣೆಗೆ ಕರಾಟೆಯಂತಹ ಕಲೆ ಕಲಿಯುವದು ಅತಿ ಮುಖ್ಯ ಎಂದು ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅಭಿಪ್ರಾಯ ಪಟ್ಟರು.

ಅವರು ಭಟ್ಕಳದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ನಡೆದ 10ನೇ ಬ್ಯಾಚ್‍ನ ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಅಪರಾಧ ಘಟನೆಗಳು ಕೇವಲ ಹದಿಹರೆಯದ ಹೆಣ್ಣು ಮಕ್ಕಳು ಮಾತ್ರವಲ್ಲ 2 ವರ್ಷದ ಹಸೂಗೂಸಿನಿಂದ 80 ವರ್ಷದ ಮಯೋಮಾನದವರನ್ನು ಬಿಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಎಲ್ಲರೂ ತಮ್ಮ ರಕ್ಷಣೆಗಾಗಿ ಕರಾಟೆಯಂತಹ ಆತ್ಮವಿಶ್ವಾಸ ವೃದ್ಧಿಸುವ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕಿದೆ. ಈ ಹಿಂದೆ ಕಲಿಯುವ ಆಸೆ ಇದ್ದರೂ ಪೂರಕವಾದ ವ್ಯವಸ್ಥೆಗಳಿರಲಿಲ್ಲ. ಇಂದು ಪಾಲಕರಿಂದ ಹಿಡಿದು ಎಲ್ಲರ ಮನಸ್ಥಿತಿ ಬದಲಾಗಿದ್ದು ಉತ್ತೇಜನ ದೊರಕುತ್ತಿರುವದು ಸಂತಸದ ಸಂಗತಿ ಎಂದರು.

ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ ಪ್ರತಿಯೊಬ್ಬರು ಕರಾಟೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಕರಾಟೆ ಕಲೆ ಕಲಿಯುವ ಮಕ್ಕಳ ಸಂಖ್ಯೆ ವೃದ್ಧಿಯಾಗಲಿ ಎಂದರು.

ವಿದ್ಯಾಂಜಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಖಾರ್ವಿ ಮಾತನಾಡಿ ಇಂತಹ ಪಠ್ಯೇತರ ಕಲೆಗಳಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಗುತ್ತಿದ್ದು ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ ಉತ್ತರಕನ್ನಡ ಜಿಲ್ಲಾ ಸ್ಫೋಟ್ಸ್ ಕರಾಟೆ ಅಸೋಶಿಯೇಶನ್ ಅಧ್ಯಕ್ಷ ಉಮೇಶ ಮೊಗೇರ ಮಾತನಾಡಿ ಒಂದು ಸಮಯದಲ್ಲಿ ಕರಾಟೆ ಎಂದರೆ ಹಣಕೊಟ್ಟು ಒದೆಯಿಸಿಕೊಳ್ಳುವುದು ಎನ್ನುವ ಭಾವನೆ ಇತ್ತು. ತಾವು ಇಂದು ಉನ್ನತ ಸ್ಥಾನ ತಲುಪಿದರೂ ಈಗಲೂ ನಾನು ತಪ್ಪು ಮಾಡಿದರೆ ನಮ್ಮ ಗುರುಗಳು ನಮ್ಮನ್ನು ಬಿಡದೇ ಬೈಯುತ್ತಾರೆ. ಕಲಿಯಲು ಯಾವ ಸಂಕೋಚವೂ ಬೇಡ ಎಂದರು.

ನ್ಯೂ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲ ಗಣಪತಿ ಶಿರೂರು, ಯು.ಬಿ.ಶೆಟ್ಟಿ ಇಂಗ್ಲಿಷ್ ಮಿಡಿಯಮ್ ಶಾಲೆಯ ಪ್ರಾಂಶುಪಾಲೆ ಅಮಿತಾ ಶೆಟ್ಟಿ ಮಾತನಾಡಿದರು.

10ನೇ ಬ್ಯಾಚ್‍ನಲ್ಲಿ 5 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪದವಿಯನ್ನು ಗ್ರ್ಯಾಂಡ್ ಮಾಸ್ಟರ್ ಹನ್ಸಿ ಸಿ ರಾಜನ್ ಅವರು ಪ್ರದಾನಿಸಿದರು. ದೇಶದಲ್ಲೇ 9 ಜನರಲ್ಲಿ ಓರ್ವರಾಗಿರುವ 8ನೇ ಬ್ಲಾಕ್ ಬೆಲ್ಟ್ ಪಡೆದ ಕರಾಟೆ ಮುಖ್ಯ ಶಿಕ್ಷಕ ಹನ್ಸಿ ರಾಜನ್ ಹಾಗೂ ಉಮೇಶ ಮೊಗೇರ ಅವರನ್ನು ಗೌರವಿಸಲಾಯಿತು.

ಶೋಟೋಕಾನ್ ಕರಾಟೆ ಇನ್ಸಿಟ್ಯೂಟ್‍ನ ಅಧ್ಯಕ್ಷ ಈಶ್ವರ ಎನ್ ನಾಯ್ಕ, ಕಾನೂನು ಸಲಹೆಗಾರ ಮನೋಜ ಎಂ ನಾಯ್ಕ ಇದ್ದರು. ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ರಾಜ್ಯಮಟ್ಟದ ಚಿನ್ನದ ಪದಕ ವಿಜೇತೆ ನಾಗಶ್ರೀ ಎಂ ನಾಯ್ಕ, ಗಂಗಾಧರ ನಾಯ್ಕ, ಪಾಂಡುರಂಗ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News