ಪಾಕ್: ಬುಡಕಟ್ಟು ಸಮುದಾಯದ ನಡುವೆ ಘರ್ಷಣೆ; 15 ಮಂದಿ ಮೃತ್ಯು

Update: 2021-10-25 17:27 GMT

ಇಸ್ಲಮಾಬಾದ್, ಅ.25: ವಾಯವ್ಯ ಪಾಕಿಸ್ತಾನದ 2 ಬುಡಕಟ್ಟು ಸಮುದಾಯದೊಳಗೆ ಅರಣ್ಯ ಭೂಮಿಯ ಸ್ವಾಮ್ಯಕ್ಕೆ ಸಂಬಂಧಿಸಿ ನಡೆದ ಘರ್ಷಣೆಯಲ್ಲಿ ಕನಿಷ್ಟ 15 ಮಂದಿ ಮೃತಪಟ್ಟಿದ್ದು 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖೈಬರ್ ಪಖ್ತೂನ್‌ವಾಲ ಪ್ರಾಂತದಲ್ಲಿರುವ ಅರಣ್ಯಭೂಮಿಯ ಒಡೆತನಕ್ಕೆ ಸಂಬಂಧಿಸಿ ಕುರ್ರಂ ಜಿಲ್ಲೆಯ ತೇರಿಮೆಗೆಲ್ ಗ್ರಾಮದ ಗೈಡು ಬುಡಕಟ್ಟಿನವರಿಗೂ ಪೆವಾರ್ ಬುಡಕಟ್ಟು ಸಮುದಾಯದವರಿಗೂ ವಿವಾದವಿದೆ. ಶನಿವಾರ ವಿವಾದಿತ ಅರಣ್ಯಪ್ರದೇಶದಲ್ಲಿ ಪೆವಾರ್ ಸಮುದಾಯದವರು ಕಟ್ಟಿಗೆ ಕಡಿಯತ್ತಿರುವುದನ್ನು ಆಕೇಪಿಸಿದ ಗೈಡು ಬುಡಕಟ್ಟಿನವರು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದ ಶನಿವಾರ 4 ಮಂದಿ ಮೃತರಾಗಿದ್ದರೆ, 7 ಮಂದಿ ರವಿವಾರ ಮತ್ತು ಸೋಮವಾರ ಮೃತರಾಗಿದ್ದಾರೆ. ಗಾಯಗೊಂಡಿರುವ ಹಲವರ ಪರಿಸ್ಥಿತಿ ಗಂಭೀರವಾಗಿದೆ . ಇಲ್ಲಿ ಎರಡೂ ಬುಡಕಟ್ಟಿನವರು ಮಾರಕ ಶಸ್ತ್ರಾಸ್ತ್ರಗಳೊಂದಿಗೆ ಪರಸ್ಪರ ಗ್ರಾಮದೊಳಗೆ ನುಗ್ಗಿ ಆಕ್ರಮಣ ಮಾಡುವುದು ಸಾಮಾನ್ಯವಾಗಿದೆ ಎಂದು ಕುರ್ರಂ ಜಿಲ್ಲಾ ಪೊಲೀಸರು ಹೇಳಿದ್ದಾರೆ.

ಶನಿವಾರದ ಪ್ರಕರಣದ ಬಳಿಕ ವಿವಾದಿತ ಅರಣ್ಯದೊಳಗೆ ಎರಡೂ ಬುಡಕಟ್ಟು ಜನರಿಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಸೋಮವಾರ ಹೆಚ್ಚುವರಿ ಭದ್ರತಾ ಪಡೆಯನ್ನು ಸ್ಥಳದಲ್ಲಿ ನಿಯೋಜಿಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News