ಬಾಲಕಿಯ ಹತ್ಯೆ ಪ್ರಕರಣದಲ್ಲಿ ಜರ್ಮನ್ ಮಹಿಳೆಗೆ 10 ವರ್ಷ ಜೈಲುಶಿಕ್ಷೆ

Update: 2021-10-25 18:14 GMT

ಮ್ಯೂನಿಚ್, ಅ.25: ಯುಜಿದಿ ಅಲ್ಪಸಂಖ್ಯಾತ ಸಮುದಾಯದ 5 ವರ್ಷದ ‘ಗುಲಾಮಿ’ ಬಾಲಕಿ ದಾಹದಿಂದ ಮರಣ ಹೊಂದಿದ ಪ್ರಕರಣದಲ್ಲಿ ಜರ್ಮನ್ ಮಹಿಳೆಗೆ ಮ್ಯೂನಿಚ್‌ನ ನ್ಯಾಯಾಲಯ ಸೋಮವಾರ 10 ವರ್ಷದ ಜೈಲುಶಿಕ್ಷೆ ವಿಧಿಸಿದೆ.

10 ವರ್ಷದ ಹಿಂದೆ ಐಸಿಸ್ ಉಗ್ರರ ಸಂಘಟನೆ ಸೇರಿದ್ದ ಜರ್ಮನಿಯ 30 ವರ್ಷದ ಜೆನಿಫರ್ ವೆಂಸಿಚ್ ಜೈಲುಶಿಕ್ಷೆಗೆ ಒಳಗಾದವರು. 2015ರಲ್ಲಿ ಐಸಿಸ್‌ನ ವಶದಲ್ಲಿದ್ದ ಇರಾಕ್‌ನ ಮೊಸುಲ್ ನಗರದಲ್ಲಿ ನೆಲೆಸಿದ್ದ ವೆಂಸಿಚ್ ಹಾಗೂ ಆಕೆಯ ಪತಿ(ಐಸಿಸ್ ಸದಸ್ಯ) ಯಜಿದಿ ಸಮುದಾಯದ ಮಹಿಳೆ ಮತ್ತು ಆಕೆಯ ಮಗುವನ್ನು ಖರೀದಿಸಿ ತಮ್ಮ ಮನೆಯಲ್ಲಿ ಜೀತದಾಳುವನ್ನಾಗಿ ಬಳಸಿಕೊಂಡಿದ್ದರು.

ಒಮ್ಮೆ ತೀವ್ರ ಅನಾರೋಗ್ಯಕ್ಕೆ ತುತ್ತಾದ ಮಗು ತನ್ನ ಬಟ್ಟೆಯಲ್ಲೇ ಮೂತ್ರ ಮಾಡಿಕೊಂಡಾಗ ಸಿಟ್ಟಾದ ದಂಪತಿ ಆ ಮಗುವನ್ನು ಬಿಸಿಲಲ್ಲಿ ಕುಳ್ಳಿರಿಸುವ ಶಿಕ್ಷೆ ವಿಧಿಸಿದ್ದರು. ಆಗ ತೀವ್ರ ಬಾಯಾರಿಕೆಯಿಂದ ಆ ಮಗು ಮೃತಪಟ್ಟಿತ್ತು ಎಂದು ಪ್ರಕರಣ ದಾಖಾಗಿತ್ತು.

ಗುಲಾಮಗಿರಿಯ ಮೂಲಕ ಮಾನವೀಯತೆಯ ವಿರುದ್ಧ ಅಪರಾಧ ಎಸಗಿರುವುದು ಹಾಗೂ ಸುಡುಬಿಸಿಲಲ್ಲಿದ್ದ ಬಾಲಕಿ ನೀರಿಗಾಗಿ ಅಂಗಲಾಚುತ್ತಿದ್ದರೂ ನೆರವು ಒದಗಿಸದೆ ಜೆನಿಫರ್ ವೆಂಸಿಚ್ ಯುದ್ಧಾಪರಾಧ ಎಸಗಿದ್ದಾರೆ ಎಂದು ದಕ್ಷಿಣ ಜರ್ಮನಿಯ ನಗರ ಮ್ಯೂನಿಚ್‌ನ ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ. ವೆಂಸಿಚ್ ಪತಿ ತಹಾ ಅಲ್ ಜುಮೈಲಿ ವಿರುದ್ಧ ಫ್ರಾಂಕ್‌ಫರ್ಟ್‌ನಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News