ಅಕ್ರಮ ತೈಲಸಂಸ್ಕರಣಾ ಸ್ಥಾವರದಲ್ಲಿ ಸ್ಫೋಟ ಕನಿಷ್ಟ 25 ಮಂದಿ ಮೃತ್ಯು

Update: 2021-10-25 18:19 GMT
ಸಾಂದರ್ಭಿಕ ಚಿತ್ರ

ಅಬುಜಾ, ಅ.25: ನೈಜೀರಿಯಾದ ರಿವರ್ಸ್ ಸ್ಟೇಟ್‌ನಲ್ಲಿನ ಅಕ್ರಮ ತೈಲಸಂಸ್ಕರಣಾ ಸ್ಥಾವರದಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕರ ಸಹಿತ ಕನಿಷ್ಟ 25 ಮಂದಿ ಮೃತರಾಗಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಶುಕ್ರವಾರ ರಾತ್ರಿ ಈ ಸ್ಫೋಟ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದುವರೆಗೆ 25 ಮೃತದೇಹ ಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಮೃತರಲ್ಲಿ ಅಪ್ರಾಪ್ತ ವಯಸ್ಕರೂ ಸೇರಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ ಎಂದು ಸಮುದಾಯದ ಮುಖಂಡ ಇಫೆಯಾನಿ ಒಮಾನೊ ಹೇಳಿದ್ದಾರೆ.

ಹೇರಳ ತೈಲ ನಿಕ್ಷೇಪವಿರುವ ನೈಜೀರಿಯಾದಲ್ಲಿ ಅಕ್ರಮ ತೈಲ ಸಂಸ್ಕರಣೆ ಸಹಜ ಪ್ರಕ್ರಿಯೆಯಾಗಿದೆ. ಕಚ್ಛಾ ತೈಲ ಸಾಗಿಸುವ ಬೃಹತ್ ಪೈಪ್‌ಗಳಿಗೆ ರಂಧ್ರಕೊರೆದು ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ತುಂಬಿಸಿ ಬಳಿಕ ಅಕ್ರಮವಾಗಿ ಈ ತೈಲಗಳನ್ನು ಸಂಸ್ಕರಿಸಲಾಗುತ್ತದೆ. ಆದರೆ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕೊರತೆಯಿಂದ ಹಲವು ಅನಾಹುತಗಳೂ ಸಂಭವಿಸುತ್ತವೆ. ಆಫ್ರಿಕಾದ ಬೃಹತ್ ತೈಲ ರಫ್ತು ಮಾಡುವ ದೇಶವಾಗಿರುವ ನೈಜೀರಿಯಾದಲ್ಲಿ ಉತ್ಪಾದನೆಯಾಗುವ ತೈಲದ 10%ದಷ್ಟನ್ನು ಕದಿಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News