ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಸಿಗದೆ ರೋಗಿ ಮೃತ್ಯು: ಆರೋಪ

Update: 2021-10-26 12:07 GMT

ಮಂಗಳೂರು, ಅ.26: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾಸರಗೋಡಿನ ಮಹಿಳೆಯೊಬ್ಬರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದ್ದು, ದಾಖಲಾತಿಗೆಂದು 1 ಗಂಟೆ ಆಂಬ್ಯುಲೆನ್ಸ್‌ನಲ್ಲೇ ಕಾದ ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎನ್ನಲಾದ ಘಟನೆ ಸೋಮವಾರ ನಡೆದಿದೆ. ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದರಿಂದ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.

ಕಾಸರಗೋಡು ನಿವಾಸಿ ಸುಶೀಲಾ (55) ಮೃತಪಟ್ಟವರು. ಅವರು ಅಂಗನವಾಡಿ ಸಹಾಯಕಿಯಾಗಿದ್ದು, ಹಲವು ಸಮಯದಿಂದ ಉರಿ ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮವಾರ ಏಕಾಏಕಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಸಂಬಂಧಿಕರು ಚಿಕಿತ್ಸೆಗೆ ಸಂಜೆ 5 ಗಂಟೆಗೆ ಕಾಸರಗೋಡು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದ್ದಾರೆ. ಅದರಂತೆ 5.15ಕ್ಕೆ ಆಂಬ್ಯುಲೆನ್ಸ್‌ನಲ್ಲಿ ಕಾಸರಗೋಡಿನಿಂದ ವೆನ್ಲಾಕ್‌ಗೆ ಅವರನ್ನು ಕರೆತರಲಾಗಿದೆ. ಈ ಸಂದರ್ಭ ದಾಖಲಾತಿಗೆ ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿ ಸುಮಾರು 45 ನಿಮಿಷ ಕಾಯಿಸಿ ಬಳಿಕ ‘ಐಸಿಯು ಇಲ್ಲ, ನೀವು ಹೊಸ ಬ್ಲಾಕ್ ಐಸಿಯುಗೆ ತೆರಳಿ’ ಎಂದು ಹೇಳಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ಚಾಲಕ ವೆನ್ಲಾಕ್‌ನ ಹೊಸ ಬ್ಲಾಕ್‌ಗೆ ಕರೆದೊಯ್ದಿದ್ದಾರೆ. ರೋಗಿ ಸುಶೀಲಾ ಅವರನ್ನು ಹೊಸ ಆಸ್ಪತ್ರೆಯ ಕಟ್ಟಡ ಎದುರು ಮತ್ತೆ 1 ಗಂಟೆ ಕಾಯಿಸಿದ ಬಳಿಕ ‘ನಮ್ಮಲ್ಲಿ ಐಸಿಯು ಇಲ್ಲ, ಬೇರೆ ಆಸ್ಪತ್ರೆಗೆ ಹೋಗಿ’ ಎಂದು ಹೇಳಿದ್ದಾರೆ ಎಂದು ದೂರಲಾಗಿದೆ. ಆಸ್ಪತ್ರೆ ದಾಖಲಿಸಿದ ಒಂದು ಗಂಟೆ ಬಳಿಕ ರೋಗಿ ಮೃತಪಟ್ಟಿದ್ದು, ಇದಕ್ಕೆ ದಾಖಲಾತಿ ವಿಳಂಬ ಮಾಡಿದ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ರೋಗಿಯ ಪತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ರೋಗಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಎಂಟ್ರಿಯಾದ ಸಂದರ್ಭದಿಂದ ಹಿಡಿದು ಒಂದೆಡೆಯಿಂದ ಮತ್ತೊಂದು ಕಡೆಗೆ ತೆರಳಲು ಸತಾಯಿಸಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಅದನ್ನು ತಪಾಸಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ನನ್ನ ಪತ್ನಿಯ ಪರಿಸ್ಥಿತಿ ಇನ್ಯಾರಿಗೂ ಬರದಿರಲಿ ಎಂದು ಸುಶೀಲಾ ಅವರ ಪತಿ ಒತ್ತಾಯಿಸಿದ್ದಾರೆ.

ಈ ಪ್ರಕರಣದ ಬಗ್ಗೆ ನಿನ್ನೆ ನನಗೂ ದೂರು ಬಂದಿದೆ. ವಸ್ತು ಸ್ಥಿತಿಯ ವರದಿಯನ್ನು ನೀಡಲು ಹೇಳಿದ್ದೇನೆ. ಆಸ್ಪತ್ರೆಯವರು ಹೇಳುವ ಪ್ರಕಾರ ನಾಲ್ಕೈದು ರೋಗಿಗಳು ಒಟ್ಟಾಗಿ ಬಂದಾಗ ಸ್ವಲ್ಪ ತಡವಾಗಿದೆ. ಆ್ಯಂಬುಲೆನ್ಸ್‌ನಲ್ಲಿ ಅದಾಗಲೇ ರೋಗಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ಹಾಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲು ಮಾತ್ರ ಸ್ವಲ್ಪ ತಡವಾಗಿದೆ ಎಂದು ಹೇಳಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು.

- ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ. ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News