×
Ad

ಬ್ಯಾಂಕುಗಳಿಗೆ 100 ಕೋಟಿ ರೂ.ಸಾಲ ವಿತರಿಸುವ ಗುರಿ: ರಾಮ ನಾಯ್ಕ್

Update: 2021-10-26 19:30 IST

ಉಡುಪಿ, ಅ.26: ಜಿಲ್ಲೆಯ ಲೀಡ್ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕಿನ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಅ.27ರ ಬುಧವಾರದಂದು ‘ಬೃಹತ್ ಸಾಲ ಸಂಪರ್ಕ ಮೇಳ’ವೊಂದನ್ನು ಮಣಿಪಾಲ ದಲ್ಲಿರುವ ಸಿಂಡಿಕೇಟ್ ಗೋಲ್ಡನ್‌ ಜ್ಯುಬಿಲಿ ಹಾಲ್‌ನಲ್ಲಿ ಹಮ್ಮಿಕೊಂಡಿದೆ ಎಂದು ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ರಾಮ ನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತ ಸರಕಾರದ ಹಣಕಾಸು ಇಲಾಖೆಯ ವಿತ್ತೀಯ ಸೇವೆಗಳ ವಿಭಾಗದ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ವ್ಯವಹರಿಸುತ್ತಿರುವ ಎಲ್ಲಾ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಆಯೋಜಿಸಿದೆ ಎಂದು ಅವರು ಹೇಳಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಳಗ್ಗೆ 10ಗಂಟೆಗೆ ಮೇಳವನ್ನು ಉದ್ಘಾಟಿಸಲಿದ್ದಾರೆ.

ಬ್ಯಾಂಕುಗಳ ಮೂಲಕ ವಿತರಿಸಲಾಗುವ ವಿವಿಧ ಸಾಲಸೌಲಭ್ಯಗಳು ಹಾಗೂ ಸರಕಾರಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಹಾಗೂ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಈ ಮೇಳ ಹೊಂದಿದೆ. ಈ ಮೇಳದಲ್ಲಿ ಜಿಲ್ಲೆಯಲ್ಲಿ ವ್ಯವಹಾರ ನಡೆಸುತ್ತಿರುವ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ವಲಯ, ಗ್ರಾಮೀಣ ಬ್ಯಾಂಕ್‌ಗಳು ಹಾಗೂ ಕಿರು ಹಣಕಾಸು ಸಂಸ್ಥೆಗಳ ಒಟ್ಟು 408 ಶಾಖೆಗಳು ಭಾಗವಹಿಸಲಿವೆ ಎಂದರು.

ಸರಕಾರದ ಮುದ್ರಾ ಯೋಜನೆ, ಪಿಎಂ ಸ್ವನಿಧಿ, ಕಿರು, ಲಘು, ಮದ್ಯಮ ಉದ್ಯಮ ಅಭಿವೃದ್ಧಿ ಯೋಜನೆಗಳು, ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು, ಕೃಷಿ ಅಭಿವೃದ್ಧಿ ಸಾಲಗಳು, ಮನೆ ಸಾಲ, ಶೈಕ್ಷಣಿಕ ಸಾಲ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಗು ತ್ತದೆ. ಸ್ಟಾಂಡ್‌ಅಪ್, ಸ್ಟಾರ್ಟ್‌ಅಪ್ ಯೋಜನೆ, ಆತ್ಮ ನಿರ್ಬರ ಯೋಜನೆಗಳ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸ ಲಾಗುವುದು. ಇದರೊಂದಿಗೆ ಅರ್ಹರಿಗೆ ಸಾಲ ಸಂಪರ್ಕ ಒದಗಿಸುವ ಉದ್ದೇಶವನ್ನು ಮೇಳ ಹೊಂದಿದೆ ಎಂದು ರಾಮ ನಾಯ್ಕ್ ತಿಳಿಸಿದರು.

ಇವುಗಳೊಂದಿಗೆ ಸಾಮಾಜಿಕ ವಿಮಾ ಮತ್ತು ಪಿಂಚಣಿ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಜಿಲ್ಲೆಯ ಎಲ್ಲಾ ಅರ್ಹ ನಾಗರಿಕರನ್ನು ತರುವ ಜವಾಬ್ದಾರಿ ಬ್ಯಾಂಕುಗಳ ಮೇಲಿದ್ದು, ಮೇಳದಲ್ಲಿ ಆದ್ಯತೆ ಮೇರೆಗೆ ಅರ್ಜಿಗಳನ್ನು ಗ್ರಾಹಕರಿಂದ ಪಡೆದು ಅವರನ್ನು ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ, ಅಚಲ ಪಿಂಚಣಿ ಯೋಜನೆಗೆ ಸೇರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕಳೆದ ಅ.13ರಿಂದಲೇ ಸಾಲ ಸಂಪರ್ಕಿಸುವ ಕಾರ್ಯಕ್ರಮವನ್ನು ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಪ್ರಾರಂಭಿಸಲಾಗಿದ್ದು, ಒಟ್ಟು ಸುಮಾರು 100 ಕೋಟಿ ರೂ. ಮೊತ್ತದ ಸಾಲವನ್ನು ಹೊಸ ಗ್ರಾಹಕರಿಗೆ ವಿತರಿಸುವ ಗುರಿಯನ್ನು ಬ್ಯಾಂಕ್‌ಗಳಿಗೆ ನೀಡಲಾಗಿದೆ ಎಂದೂ ಕೆನರಾ ಬ್ಯಾಂಕಿನ ಜಿಎಂ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ-1ರ ಉಪ ಮಹಾಪ್ರಬಂಧಕಿ ಲೀನಾ ಪಿಂಟೊ, ಉಡುಪಿ-2ರ ಸಹಾಯಕ ಮಹಾ ಪ್ರಬಂಧಕ ಕಾಳಿ ಕೆ., ಯೂನಿಯನ್ ಬ್ಯಾಂಕ್ ಪ್ರಾದೇಶಿ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಡಾ.ವಾಸಪ್ಪಾ, ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ರವಿ ಬಿ.ಜಿ., ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ರಾಜಗೋಪಾಲ್, ಜಿಲ್ಲೆಯ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಪಿ.ಎಂ.ಪಿಂಜಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News