ಅ.28ಕ್ಕೆ ಉಡುಪಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತೆಗಳ ಗಾಯನ

Update: 2021-10-26 14:04 GMT

ಉಡುಪಿ, ಅ.26: ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ವೈಶಿಷ್ಠ ಪೂರ್ಣವಾಗಿ ಆಚರಿಸುವ ಕುರಿತಂತೆ ಅ.28ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ‘1.ಬಾರಿಸು ಕನ್ನಡ ಡಿಂಡಿಮವ, 2.ಜೋಗದ ಸಿರಿ ಬೆಳಕಿನಲ್ಲಿ, 3.ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಗೀತೆಗಳನ್ನು ಹಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ವರ್ಚುವಲ್ ಸಭೆಯ ಮೂಲಕ ಸೂಚನೆ ನೀಡಿದ್ದಾರೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಶ್ರೀಕೃಷ್ಣ ಮಠ, ಮಲ್ಪೆ ಬೀಚ್, ಮಲ್ಪೆ ಸೀವಾಕ್, ಕಾರ್ಕಳದ ಜೈನ ಬಸದಿ, ಗೊಮ್ಮಟಬೆಟ್ಟ, ವರಂಗ ಮುಂತಾದ ಪ್ರದೇಶಗಳಲ್ಲಿ ಸಹ ಈ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು. ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್, ಕಾಪು ಲೈಟ್ ಹೌಸ್ ಬಳಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಶ್ರೀಕೃಷ್ಣ ಮಠ, ಮಲ್ಪೆ ಬೀಚ್, ಮಲ್ಪೆ ಸೀವಾಕ್, ಕಾರ್ಕಳದ ಜೈನ ಬಸದಿ, ಗೊಮ್ಮಟಬೆಟ್ಟ, ವರಂಗ ಮುಂತಾದ ಪ್ರದೇಶಗಳಲ್ಲಿ ಸಹ ಈ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು. ಪಡುಬಿದ್ರೆಯ ಬ್ಲೂ ಫ್ಲ್ಯಾಗ್ ಬೀಚ್, ಕಾಪು ಲೈಟ್ ಹೌಸ್ ಬಳಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಮೀನುಗಾರಿಕೆ ಇಲಾಖೆ ವತಿಯಿಂದ ಬೋಟ್‌ಗಳಲ್ಲಿ ಮೀನುಗಾರರಿಂದ, ಮೆಸ್ಕಾಂ ವತಿಯಿಂದ ಲೈನ್‌ಮೆನ್‌ಗಳ ಮೂಲಕ, ಕೈಗಾರಿಕೆ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಕೈಗಾರಿಕೆ ಸಂಸ್ಥೆಗಳಲ್ಲಿ, ಗೇರುಬೀಜ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಂದ, ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಕರಿಂದ ಅರಣ್ಯದಲ್ಲಿ, ಟ್ರೀ ಪಾರ್ಕ್‌ಗಳಲ್ಲಿ, ಮುಜರಾಯಿ ಇಲಾಖೆ ವತಿಯಿಂದ ಕೊಲ್ಲೂರು, ಮಂದಾರ್ತಿ, ಆನೆಗುಡ್ಡೆ ದೇವಸ್ಥಾನಗಳ ಮುಂಭಾಗದಲ್ಲಿ ಕಾರ್ಯ ಕ್ರಮಗಳನ್ನು ಆಯೋಜಿಸುವಂತೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರಕಾರ್ಮಿಕರನ್ನು ಒಳಗೊಂಡ ಕಾರ್ಯಕ್ರಮ ರೂಪಿಸುವಂತೆ ಎಲ್ಲಾ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿ ಗಳಿಂದ ಕಾರ್ಯಕ್ರಮ ಆಯೋಜಿಸುವಂತೆ ಪ್ರೌಢ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಮಾಹೆ ಸಂಸ್ಥೆಯಲ್ಲೂ ಸಹ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿ, ಜಿಲ್ಲೆಯ ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಸಿಬ್ಬಂದಿಗಳಿಂದ ಕನ್ನಡ ಗೀತೆಗಳನ್ನು ಹಾಡಿಸಿ ಎಂದರು.

ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸಹ ಕನ್ನಡ ಗೀತೆಗಳನ್ನು ಹಾಡುವಂತೆ ತಿಳಿಸಿದ ಅವರು ಈ ಕುರಿತಂತೆ 2 ದಿನ ಮೊದಲು ರಿಹರ್ಸಲ್ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎಲ್ಲಾ ಸಿಬ್ಬಂದಿಗಳೂ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸೇರಿ ಹಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.

ಉಡುಪಿ ನಗರಸಭೆಯಿಂದ ಪೌರ ಕಾರ್ಮಿಕರು, ಸಿಬ್ಬಂದಿ ಮತ್ತು ನಗರಸಭಾ ಸದಸ್ಯರನ್ನೊಳಗೊಂಡ 3 ತಂಡಗಳನ್ನು ರಚಿಸಿ ಕೊಂಡು ಹಾಡಲು ವ್ಯವಸ್ಥೆ ಮಾಡಿಕೊಳ್ಳುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದರು.

ಅ.28ರಂದು ಜಿಲ್ಲೆಯಾದ್ಯಂತ ನಡೆಯುವ ಕಾರ್ಯಕ್ರಮಗಳ ಸಂಪೂರ್ಣ ದಾಖಲೀಕರಣ ಕಾರ್ಯವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುವಂತೆ ಹಾಗೂ ಮಲ್ಪೆ ಬೋಟ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುರಕ್ಷಾ ಸಾಧನಗಳನ್ನು ಧರಿಸಿಕೊಂಡು ಕಾರ್ಯಕ್ರಮ ಆಯೋಜಿಸುವಂತೆ ಮತ್ತು ಎಲ್ಲಾ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಡಿಸಿ ತಿಳಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮುದ್ರದ ಮಧ್ಯೆ ಮೊಳಗಲಿದೆ ಬಾರಿಸು ಕನ್ನಡ ಡಿಂಡಿಮವ

ಬಾರಿಸು ಕನ್ನಡ ಡಿಂಡಿಮವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಕನ್ನಡ ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಲ್ಪೆಯಲ್ಲಿ 100 ಮಂದಿ ಕಲಾವಿದರು ಬೋಟ್‌ನಲ್ಲಿ ತೆರಳಿ ಸಮುದ್ರದಲ್ಲಿ ಹಾಡಲಿದ್ದಾರೆ. ಕೋಟದ ಡಾ.ಶಿವರಾಮ ಕಾರಂತ ಥೀಮ್‌ ಪಾರ್ಕ್‌ನಲ್ಲಿ ಸಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News