ಶಿರ್ವ: ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಗ್ರಾಪಂನಿಂದ ದಂಡ !

Update: 2021-10-26 14:21 GMT

ಶಿರ್ವ, ಅ.26: ಗ್ರಾಮದಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಗುಟ್ಕಾ ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಳುಗುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವವರ ವಿರುದ್ಧ ಕ್ರಮಕ್ಕೆ ಶಿರ್ವ ಗ್ರಾಮ ಪಂಚಾಯತ್ ಮಂದಾಗಿದ್ದು, ಅದರಂತೆ ತಪ್ಪಿತಸ್ಥರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

ಪ್ರತಿದಿನ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಲು ಉತ್ತರ ಕರ್ನಾಟಕ ಮೂಲದ ನೂರಾರು ವಲಸೆ ಕಾರ್ಮಿಕರು ಶಿರ್ವ ಬಸ್ ನಿಲ್ದಾಣ ಹಾಗೂ ಪಂಚಾಯತ್ ಕಟ್ಟಡದ ಮುಂದೆ ಜಮಾಯಿಸುತ್ತಾರೆ. ಇವರು ತಂಬಾಕು ಉತ್ಪನ್ನಗಳನ್ನು ತಿಂದು ಎಲ್ಲೆಂದರಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಉಗಿಯುವುದು ಮತ್ತು ಅದರ ಪೊಟ್ಟಣಗಳನ್ನು ಎಸೆಯುವುದು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದರು. ಇದರಿಂದ ಈ ಎರಡು ಕಡೆಗಳಲ್ಲಿ ಅಸಹ್ಯ ವಾತಾವರಣಗಳು ಕಂಡುಬರುತ್ತಿದ್ದವು.

ಈ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ಅಲ್ಲಿ ನೆರೆಯುತ್ತಿದ್ದ ಕಾರ್ಮಿಕರಿಗೆ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ಮನವಿ ಮಾಡಿಕೊಂಡಿದ್ದರು. ಆದರೂ ಕಾರ್ಮಿಕರು ಈ ಚಾಳಿ ಮುಂದುವರೆಸುತ್ತಿ ರುವುದನ್ನು ಗಮನಿಸಿದ ಅಧ್ಯಕ್ಷರು, ಈ ರೀತಿ ದಂಡ ವಿಧಿಸುವ ಮೂಲಕ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಸಾಂಕ್ರಾಮಿಕ ರೋಗ ತಡೆ ಮತ್ತು ನಿಯಂತ್ರಣ ಕಾಯಿದೆಯ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳುವವರು ಹಾಗೂ ಕಸ ಎಸೆಯುವವರ ವಿರುದ್ಧ ದಂಡ ವಿಧಿಸುವ ಪಂಚಾಯತ್‌ನ ಅಧಿಕಾರವನ್ನು ಬಳಸಿ ಅಧಿಕಾರಿಗಳು ತಪ್ಪಿತಸ್ಥ ರಿಗೆ ಸ್ಥಳದಲ್ಲಿಯೇ ದಂಡ ವಿಧಿಸುತ್ತಿದ್ದಾರೆ. ಸಿಬಂದಿಗಳಾದ ಪ್ರವೀಣ್, ಕಿಶೋರ್, ರಕ್ಷಿತ್ ಮತ್ತು ಅಮೃತಾ ಅವರ ತಂಡ ಈ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಹಲವು ಮಂದಿಗೆ ದಂಡ ವಿಧಿಸಿರುವುದರ ಪರಿಣಾಮ ಇದೀಗ ಈ ಸಮಸ್ಯೆ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್.

ಗ್ರಾಪಂ ಕಾರ್ಯಕ್ಕೆ ವ್ಯಾಪಾಕ ಪ್ರಶಂಸೆ

ಉಳುಗುಳಿದವರ ವಿರುದ್ಧ ದಂಡ ವಿಧಿಸಿರುವ ಗ್ರಾಪಂ ರಸೀದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಶಿರ್ವ ಗ್ರಾಪಂನ ಈ ದಿಟ್ಟ ಕ್ರಮದ ಬಗ್ಗೆ ವ್ಯಾಪಾಕ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳು ಇದೇ ರೀತಿಯ ಕ್ರಮ ತೆಗೆದು ಕೊಳ್ಳುವಂತೆ ಒತ್ತಾಯಗಳು ಕೇಳಿಬಂದಿವೆ.

ಶಿರ್ವ ಗ್ರಾ.ಪಂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದ್ದು ಗ್ರಾಮದಲ್ಲಿ ಎಸ್‌ಎಲ್‌ಆರ್ ಘಟಕ ಆರಂಭಿಸಿ ಶಿಸ್ತುಬದ್ದವಾಗಿ ಕಸ ವಿಲೇವಾರಿ ನಡೆಸುತ್ತಿದೆ. ಗ್ರಾಮದ ಸಾರ್ವಜನಿಕ ಸ್ಥಳ, ರಸ್ತೆ, ತಂಗುದಾಣ ಮೊದಲಾದ ಕಡೆ ತ್ಯಾಜ್ಯ ಕಂಡು ಬಂದಲ್ಲಿ ಗ್ರಾಪಂಗೆ ವಾಟ್ಸ್‌ಆಪ್ ಮೂಲಕ ಸಂದೇಶ ನೀಡುವಂತೆ ಗ್ರಾಮಸ್ಥರಲ್ಲಿ ವಿನಂತಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ವಲಸೆ ಕಾರ್ಮಿಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಅದನ್ನು ನಿರ್ಲಕ್ಷಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ವಲಸೆ ಕಾರ್ಮಿಕರು ಮಾತ್ರವಲ್ಲ ಈ ರೀತಿ ತಪ್ಪು ಮಾಡಿದ ಎಲ್ಲರಿಗೂ ದಂಡ ವಿಧಿಸಲಾಗುವುದು. ಗ್ರಾಮ ನೈರ್ಮಲ್ಯಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ.

-ಕೆ.ಆರ್. ಪಾಟ್ಕರ್, ಅಧ್ಯಕ್ಷರು, ಶಿರ್ವ ಗ್ರಾ,ಪಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News