ಕಲಾವಿದ ಬೇಲ್ತೂರು ರಮೇಶ್‌ರಿಗೆ ತಲ್ಲೂರು ಪ್ರಶಸ್ತಿ ಪ್ರದಾನ

Update: 2021-10-26 14:44 GMT

ಉಡುಪಿ, ಅ.26: ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಕಿರಿಮಂಜೇಶ್ವರ ಇವರ ಸಂಯೋಜನೆಯಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಯಕ್ಷ ಅಷ್ಟಾಹ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಅವರಿಗೆ ಪ್ರಥಮ ವರ್ಷದ ತಲ್ಲೂರ್ ಫ್ಯಾಮಿಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಕಲಾವಿದ ಎಂದರೆ ಕಲೆಯನ್ನು ರಕ್ಷಿಸಿ, ಬೆಳೆಸುವವ. ಮುಂದಿನ ಪೀಳಿಗೆ ಅದನ್ನು ಬೆಳೆಸಬೇಕು ಎಂಬ ಹಂಬಲದಿಂದ ಪ್ರಶಸ್ತಿ ಪ್ರದಾನದಂತಹ ಪ್ರೋತ್ಸಾಹ ಕಲೆಗಾಗಿ ದಶಕಗಳ ತಮ್ಮನ್ನು ಅರ್ಪಿಸಿ ಕೊಂಡು ಬರುವುದು ಸುಲಭದ ಮಾತಲ್ಲ. ಕಾಲನ ಹೊಡೆತಕ್ಕೆ ಕಲೆ ಸಿಲುಕದಂತೆ ಉಳಿಸಿಕೊಳ್ಳಬೇಕು ಎಂದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕರ್ಣಾಟಕ ಬ್ಯಾಂಕಿನ ಸಹಾಯಕ ಜನರಲ್ ಮೆನೆಜರ್ ಬಿ.ರಾಜಗೋಪಾಲ್ ತಂತ್ರಿ, ಯಕ್ಷಸಿರಿ ಟ್ರಸ್ಟ್‌ನ ಡಾ.ಎಚ್.ಎಸ್.ಮೋಹನ್ ಸಾಗರ, ಎಚ್.ಎಸ್.ಮಂಜಪ್ಪಸಾಗರ ಉಪಸ್ಥಿತರಿದ್ದರು.

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಸ್ವಾಗತಿಸಿದರು. ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News