×
Ad

ಉಡುಪಿ; ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ 10 ವರ್ಷ ಜೈಲುಶಿಕ್ಷೆ

Update: 2021-10-26 20:46 IST

ಉಡುಪಿ, ಅ.26: ಮೂರು ವರ್ಷಗಳ ಹಿಂದೆ ನೆರೆಮನೆಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷ ಪ್ರಾಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ 10ವರ್ಷಗಳ ಜೈಲುಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ವೆಂಕಟೇಶ್(30) ಶಿಕ್ಷೆಗೆ ಗುರಿಯಾಗಿರುವ ಆರೋಪಿ.

2018ರಲ್ಲಿ ತನ್ನ ಮನೆಗೆ ಆಟ ಆಡಲು ಬಂದ ನೆರೆಮನೆಯ ಸಂತ್ರಸ್ತ ಬಾಲಕಿ ಮೇಲೆ ವೆಂಕಟೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಅಂದಿನ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯ ಒಟ್ಟು 19 ಮಂದಿ ಸಾಕ್ಷಿಗಳ ಪೈಕಿ 12 ಮಂದಿ ವಿಚಾರಣೆ ನಡೆಸಿದ್ದು, ವೈದ್ಯಕೀಯ ದಾಖಲೆಗಳು, ನೊಂದ ಬಾಲಕಿ ಹಾಗೂ ಇತರ ಸಾಕ್ಷಿಗಳು ಹೇಳಿದ ಸಾಕ್ಷ್ಯಾಧಾರಗಳು ಅಭಿಯೋಜನೆ ಪರವಾಗಿದ್ದವು. ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ, ಆರೋಪಿಗೆ ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಸಜೆ, 20 ಸಾವಿರ ರೂ. ದಂಡ(ಈ ಮೊತ್ತದಲ್ಲಿ 15ಸಾವಿರ ರೂ. ಸಂತ್ರಸ್ತೆಗೆ, 5 ಸಾವಿರ ಸರಕಾರಕ್ಕೆ) ಮತ್ತು ಸಂತ್ರಸ್ತೆಗೆ 75 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದರು.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News