ಬಂಟ್ವಾಳ: ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೋವಿಡ್ ಎರಡನೇ ಡೋಸ್ ನೀಡಿದ ಬಗ್ಗೆ ಎಸ್ಎಂಎಸ್

Update: 2021-10-26 15:22 GMT
ಸಾಂದರ್ಭಿಕ ಚಿತ್ರ

ಬಂಟ್ವಾಳ, ಅ.26: ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಕೋವಿಡ್ - 19 ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್‌.ಎಂ.ಎಸ್. ಬಂದಿದೆ ಎಂದು ಮೃತರ ಪುತ್ರ ಆರೋಪಿಸಿದ್ದಾರೆ.

ತಾಲೂಕಿನ ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಎಂಬವರು ಎಪ್ರಿಲ್ 27ರಂದು ಮೃತಪಟ್ಟಿದ್ದಾರೆ. ಅಕ್ಟೋಬರ್ 14ರಂದು ಅವರಿಗೆ ಕೋವಿಡ್ - 19 ಎರಡನೇ ಡೋಸ್ ನೀಡಲಾಗಿದೆ ಎಂದು ಎಸ್.ಎಂ.ಎಸ್. ಬಂದಿದೆ ಎಂದು ಮೃತ ಹಸೈನಾರ್ ಅವರ ಪುತ್ರ ಸಾದಿಕ್ ಆರೋಪಿಸಿದ್ದಾರೆ.

ತಂದೆಗೆ ಮಾರ್ಚ್ 24ರಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ - 19 ಲಸಿಕೆಯ ಪ್ರಥಮ ಡೋಸ್ ನೀಡಲಾಗಿತ್ತು. ಎಪ್ರಿಲ್ 27ರಂದು ಅವರು ಮೃತಪಟ್ಟಿದ್ದಾರೆ. ಅಕ್ಟೋಬರ್ 14ರಂದು ನನ್ನ ಮೊಬೈಲ್ ಗೆ ಒಟಿಪಿ ಬಂದಿದ್ದು ಬಳಿಕ ಎಸ್.ಎಂ.ಎಸ್. ಬಂದಿದೆ. ಎಸ್.ಎಂ.ಎಸ್. ಓದಿದಾಗ ತನ್ನ ತಂದೆಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಇತ್ತು. ಬಳಿಕ ನಾನು ಎಸ್.ಎಂ.ಎಸ್. ಲಿಂಕ್ ಓಪನ್ ಮಾಡಿ ಪಿಡಿಎಫ್ ಪರಿಶೀಲಿಸಿದಾಗ ಅದರಲ್ಲೂ ಎರಡನೇ ಡೋಸ್ ನೀಡಿರುವ ದೃಢಪಡಿಸಲಾಗಿದೆ ಎಂದು ಸಾದಿಕ್ ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನನ್ನ ಮೊಬೈಲ್ ಗೆ ಕರೆಯೊಂದು ಬಂದಿತ್ತು. ಕರೆ ಮಾಡಿದವರು ತಂದೆಗೆ ಎರಡನೇ ಡೋಸ್ ನೀಡುವಂತೆ ಹೇಳಿದರು. ತಂದೆ ನಿಧನರಾದ ಬಗ್ಗೆ ನಾನು ಅವರಿಗೆ ತಿಳಿಸಿದ್ದೆ. ಆದರೂ ತಂದೆಗೆ ಎರಡನೇ ಡೋಸ್ ನೀಡಿರುವ ಎಸ್.ಎಂ.ಎಸ್. ಬಂದಿರುವುದು ಹೇಗೆ ಎಂದು ನನಗೆ ತಿಳಿದಿಲ್ಲ ಎಂದು ಸಾದಿಕ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News