ಫೆ.13ರಂದು ಮಣಿಪಾಲ ಮ್ಯಾರಥಾನ್-2022

Update: 2021-10-26 16:18 GMT

ಉಡುಪಿ, ಅ.26: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಮಣಿಪಾಲ ಮ್ಯಾರಥಾನ್‌ನ ಐದನೇ ಆವೃತ್ತಿ ‘ಎಂಎಂ-2022’ ಮುಂದಿನ ಫೆ.13ರಂದು ನಡೆಯಲಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್ ಅವರು ಪ್ರಕಟಿಸಿದ್ದಾರೆ.

ಮಣಿಪಾಲದಲ್ಲಿ ಇಂದು ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೋನದ ಕಾರಣದಿಂದ ಕಳೆದ ಬಾರಿ ಈ ಪ್ರತಿಷ್ಠಿತ ಮ್ಯಾರಥಾನ್‌ನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸರಕಾರಗಳು ಹಾಗೂ ಜಿಲ್ಲಾಡಳಿತದ ಎಲ್ಲಾ ಕೋವಿಡ್-19 ಮಾರ್ಗಸೂಚಿಗಳನ್ನು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮ್ಯಾರಥಾನ್‌ನ್ನು ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕಳೆದ ಸಲದಂತೆ ಈ ಬಾರಿಯೂ 42 ಕಿ.ಮೀ.ಗಳ ಫುಲ್ ಮ್ಯಾರಥಾನ್, 21ಕಿ.ಮೀ.ದೂರದ ಹಾಫ್ ಮ್ಯಾರಥಾನ್, ವಿವಿಧ ವರ್ಗಗಳಿಗೆ 10, 5, 3 ಕಿ.ಮೀ. ಮ್ಯಾರಥಾನ್ ಓಟದ ಸ್ಪರ್ಧೆಗಳನ್ನು ನಡೆಸಲಾಗುವುದು. 42ಕಿ.ಮೀ. ಮ್ಯಾರಥಾನ್ ಸ್ಪರ್ಧೆಗೆ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಂದ ಅರ್ಜಿಗಳನ್ನು ನಿರೀಕ್ಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಶ್ವದ ಪ್ರಮುಖ ಮ್ಯಾರಥಾನ್ ಓಟಗಾರರು ಭಾಗವಹಿಸುವ ನಿರೀಕ್ಷೆ ನಮಗಿದೆ ಎಂದು ರಘುಪತಿ ಭಟ್ ತಿಳಿಸಿದರು.

ದೀಪಾವಳಿ ಕಳೆದ ಬಳಿಕ ಆನ್‌ಲೈನ್‌ನಲ್ಲಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಕಳೆದ ಸಲದಂತೆ ಈ ಬಾರಿಯೂ 6ರಿಂದ 8 ಸಾವಿರ ಸ್ಪರ್ಧಿಗಳನ್ನು ನಿರೀಕ್ಷಿಸಲಾಗಿದೆ. ವಿಜೇತರಿಗೆ ನಗದು ಸೇರಿ ವಿಶೇಷ ಬಹುಮಾನ ಗಳಿವೆ. ಈ ಬಾರಿ ಉಡುಪಿಯ ಸ್ಪರ್ಧಿಗಳಿಂದ ಫುಲ್ ಮ್ಯಾರಥಾನ್‌ಗೆ ಹೆಚ್ಚಿನ ಅರ್ಜಿಗಳನ್ನು ನಿರೀಕ್ಷಿಸಲಾಗಿದೆ ಎಂದು ಭಟ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೀಡಿರುವ ಫಿಟ್ ಇಂಡಿಯಾ ಕರೆಗೆ ಪೂರಕ ವಾಗಿ ಈ ಮ್ಯಾರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಜನರು ದೈಹಿಕವಾಗಿ ಸಶಕ್ತರಾಗಿರಲು ಪೂರಕವಾಗಿ ಈ ಸ್ಪರ್ಧೆ ನಡೆಯಲಿದೆ. ಜಿಲ್ಲೆಯ ಯುವಜನತೆ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ನಿರೀಕ್ಷೆಯಾಗಿದೆ ಎಂದರು.

ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ನಿರ್ದೇಶಕ ಎಸ್.ಪಿ.ಕರ್, ಕ.ಪ್ರಕಾಶ್‌ ಚಂದ್ರ, ಡಾ.ಶೋಭಾ ಈರಪ್ಪ ಹಾಗೂ ಅಥ್ಲೆಟಿಕ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News