ಬೆಂಗರೆ ಕಸಬಾ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೊರತೆ !

Update: 2021-10-26 16:44 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಅ. 26: ಸುಮಾರು 63 ವರ್ಷಗಳ ಇತಿಹಾಸವಿರುವ ಬೆಂಗರೆ ಕಸಬಾ ಸರಕಾರಿ ಶಾಲೆಯಲ್ಲಿ ನಿರೀಕ್ಷೆಗೂ ಮೀರಿದ ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.

1958ರಲ್ಲಿ ಸ್ಥಾಪನೆಗೊಂಡ ದ.ಕ.ಜಿಪಂ.ಸ.ಹಿ.ಪ್ರಾ.ಶಾಲೆಯಲ್ಲಿ 1ರಿಂದ 7ನೆ ತರಗತಿ ಇದ್ದು, ಕಳೆದ ವರ್ಷ ಇಲ್ಲಿ 438 ವಿದ್ಯಾರ್ಥಿಗಳಿದ್ದರು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ 560 ತಲುಪಿದೆ. ಇನ್ನೂ ಕೆಲವು ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಶಾಲೆಗೆ 14 ಶಿಕ್ಷಕರ ಹುದ್ದೆ ಮಂಜೂರಾಗಿದೆ. ಆದರೆ, ಈಗ ಕೇವಲ 4 ಶಿಕ್ಷಕರು ಮಾತ್ರ ಇದ್ದಾರೆ. 2016ರಿಂದ ಮುಖ್ಯ ಶಿಕ್ಷಕ ಹುದ್ದೆ ಖಾಲಿ ಇದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಿಸಿ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

30 ವಿದ್ಯಾರ್ಥಿಗಳಿಗೆ ತಲಾ ಒಬ್ಬರು ಶಿಕ್ಷಕರು ಇರಬೇಕು ಎಂಬುದು ಶಿಕ್ಷಣ ಇಲಾಖೆಯ ನೀತಿಯಾಗಿದೆ. ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹೋಲಿಸಿದರೆ 19 ಶಿಕ್ಷಕರು ಇರಬೇಕು. ಆದರೆ, ಇಲಾಖೆಯು ಕೇವಲ 4 ಶಿಕ್ಷಕರ ಮೂಲಕ ಪಾಠ ಬೋಧಿಸಲು ಮುಂದಾಗಿದೆ. ಅದಲ್ಲದೆ ಶಾಲೆಯಲ್ಲಿ 18 ಕೊಠಡಿಗಳಿದ್ದು, ಆ ಪೈಕಿ ನಲಿಕಲಿ ಕೊಠಡಿ, ಕಂಪ್ಯೂಟರ್ ತರಬೇತಿ ಕೊಠಡಿ ಸಹಿತ ಬಹುತೇಕ ಕೊಠಡಿಗಳು ಸೋರುತ್ತಿವೆ. ಬೆಂಚ್/ಡೆಸ್ಕ್‌ಗಳ ಕೊರತೆಯೂ ಇದೆ.

ಕಳೆದ ಮೂರು ವರ್ಷದಿಂದ ಇಲ್ಲಿ ಆಂಗ್ಲಮಾಧ್ಯಮ ಶಾಲೆಯಲ್ಲದೆ ಎಲ್‌ಕೆಜಿ/ಯುಕೆಜಿ ತರಗತಿಯೂ ಆರಂಭಗೊಂಡಿದೆ. 2 ಅಂಗನವಾಡಿ ಕೇಂದ್ರವೂ ಇದೆ. ವಿಶಾಲ ಆಟದ ಮೈದಾನವೂ ಇದೆ. ಇಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಶಿಕ್ಷಕರ ಕೊರತೆಯು ನಮಗೆ ಸಮಸ್ಯೆಯಾಗಿ ಕಾಡಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಸ್ಪಂದಿಸುವ ವಿಶ್ವಾಸವಿದೆ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಕೈರುನ್ನಿಸಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News