ಮಂಗಳೂರು: ಆಳಸಮುದ್ರದಲ್ಲಿ ಬೃಹತ್ ತಿಮಿಂಗಲ ಪತ್ತೆ

Update: 2021-10-26 17:27 GMT

ಮಂಗಳೂರು, ಅ.26: ನಗರದಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಸುಮಾರು 1200 ಕೆಜಿ ತೂಕದ ಬೃಹತ್ ತಿಮಿಂಗಿಲವೊಂದು ಇತ್ತೀಚೆಗೆ ದೊರೆತಿದ್ದು, ಅದನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಸಾಗರ್ ಎಂಬ ಹೆಸರಿನ ಬೋಟ್ 10 ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ಕಡಲಿಗೆ ತೆರಳಿತ್ತು. ಮೂರು ದಿನಗಳ ಹಿಂದೆ ಸಮುದ್ರ ದಡದಿಂದ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಈ ಭಾರೀ ತಿಮಿಂಗಿಲ ಬಲೆಗೆ ಬಿದ್ದಿದೆ ಎನ್ನಲಾಗಿದೆ. ಅದನ್ನು ಕಡಲಿಗೆ ಮರಳಿ ಬಿಡಲಾಗಿದೆ.

ತಿಮಿಂಗಿಲವನ್ನು ಸಮುದ್ರದಿಂದ ಮೇಲೆತ್ತುವಾಗ ಬೋಟ್‌ನ ಏರಿಕಂಬವೇ ತುಂಡಾಗಿತ್ತು. ಇದರಿಂದ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬಲೆ ಮೇಲೆತ್ತುವಾಗ ಭಾರೀ ಭಾರ ಇದ್ದುದರಿಂದ ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗಲಿದೆ ಎಂದು ಮೀನುಗಾರರು ಭಾವಿಸಿದ್ದರೂ ಮೇಲೆತ್ತಿದಾಗಲೇ ಅದು ತಿಮಿಂಗಿಲ ಎಂದು ತಿಳಿಯಿತು ಎನ್ನಲಾಗಿದೆ.

ತಿಮಿಂಗಿಲಗಳು ಅಳಿನಂಚಿನ ಪ್ರಬೇಧವಾಗಿದ್ದರಿಂದ ಅದನ್ನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಬಲೆಯನ್ನೇ ಕತ್ತರಿಸಿ ಮರಳಿ ಸಮುದ್ರಕ್ಕೆ ಬಿಡಲಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News