ಪುತ್ತೂರು: 2ನೇ ದಿನಕ್ಕೆ ಕಾಲಿಟ್ಟ ಕೆ.ಎಸ್.ಆರ್.ಟಿ.ಸಿ ಮಜ್ದೂರ್ ಸಂಘದ ಉಪವಾಸ ಸತ್ಯಾಗ್ರಹ

Update: 2021-10-26 17:42 GMT

ಪುತ್ತೂರು: ಕೆ.ಎಸ್.ಆರ್.ಟಿ.ಸಿ ನೌಕರರ ಮಾಸಿಕ ವೇತನ ಪಾವತಿ ಹಾಗೂ ನಿವೃತ್ತ ನೌಕರರ ಸೌಲಭ್ಯ ಪಾವತಿ ಮಾಡುವಲ್ಲಿ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ ಕೆ.ಎಸ್.ಆರ್.ಟಿ.ಸಿ  ಮಜ್ದೂರ್ ಸಂಘದ ಸದಸ್ಯರಿಂದ ಪುತ್ತೂರು ಮಿನಿ ವಿಧಾನ ಸೌಧದ ಮುಂಬಾಗದಲ್ಲಿರುವ ಅಮರ್ ಜವಾಜ್ ಸ್ಮಾರಕ ಜ್ಯೋತಿಯ ಬಳಿಯಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ.

ಕೆ.ಎಸ್.ಆರ್.ಟಿ.ಸಿ ಮಜ್ದೂರ್ ಸಂಘದ ಸದಸ್ಯರಾದ ಸಂಸ್ಥೆಯ ಚಾಲಕರು, ನಿರ್ವಾಹಕರು, ನಿವೃತ ಸಿಬಂದಿ ಹಾಗೂ ತಾಂತ್ರಿಕ ಸಿಬಂದಿಗಳಾದ ಶಾಂತರಾಮ ವಿಟ್ಲ, ಸಂಜೀವ ಗೌಡ, ಮಹಾಬಲ ಗಡಿಮಾರ್, ಅಶೋಕ್ ಭಟ್, ರಾಮಕೃಷ್ಣ ಜಿ., ಶ್ರೀಧರ್ ಭೂಸಾರೆ, ವಾಸುದೇವ ಪ್ರಭು, ಜಗದೀಶ ಕುಂಬಾರ, ಸತ್ಯನಾರಾಯಣ ಡಿ., ದೇವಾನಂದ ವಿಟ್ಲ ಅಮರಣಾಂತ ಉಪವಾಸ ನಿರತರಾಗಿದ್ದಾರೆ. 

ಪುತ್ತೂರು ಶಾಸಕ ಸಂಜೀವ ಮಠಂದೂರು ಮಂಗಳವಾರ ಸ್ಥಳಕ್ಕೆ ಆಗಮಿಸಿ ಅಮರಣಾಂತ ಉಪವಾಸ ನಿರತರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನಾ ನಿರತರ ಸಮಸ್ಯೆಗಳು ಕೇವಲ ಪುತ್ತೂರಿದ್ದು ಮಾತ್ರವಲ್ಲ ರಾಜ್ಯದ ಎಲ್ಲಾ ಕೆಎಸ್‍ಆರ್‍ಟಿಸಿ ನೌಕರರ ಸಮಸ್ಯೆಯಾಗಿದೆ. ಆರ್ಥಿಕ ತೊಂದರೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರೊಂದಿಗೆ, ಸಾರಿಗೆ ಸಚಿವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೇನೆ. ಪುತ್ತೂರು ವಿಭಾಗಕ್ಕೆ ನಿವೃತ್ತ ನೌಕರರ ನಿವೃತ್ತಿ ಸೌಲಭ್ಯವನ್ನು ನೀಡಲು ರೂ. 5ಕೋಟಿ ಬೇಕಾಗಿದೆ. ಸ್ಥಳೀಯವಾಗಿ ಈ ಮೊತ್ತವನ್ನು ಬಿಡುಗಡೆ ಮಾಡುವಂತಿಲ್ಲ. ಕೆಎಸ್‍ಆರ್‍ಟಿಸಿ ಕೇಂದ್ರ ಕಚೇರಿಯಿಂದಲೇ ಈ ಮೊತ್ತ ಬಿಡುಗಡೆಯಾಗಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉಪಸ್ಥಿತಿಯಲ್ಲಿ ಈ ಕುರಿತು ಮಾತುಕತೆಯನ್ನು ಮುಷ್ಕರ ನಿರತರ ಸಮ್ಮುಖದಲ್ಲಿ ಮಾಡುತ್ತೇನೆ ಎಂದು  ಭರವಸೆ ನೀಡಿದರು.

ವಯೋವೃದ್ಧರ ಮನವೊಸಿದ ಶಾಸಕರು

ಮಂಗಳವಾರ  ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಚಾಲಕ 76 ವರ್ಷ ವಯಸ್ಸಿನ  ವಿಶ್ವನಾಥ್ ರೈ ಮಾಡಾವು ಅವರು ತಾನೂ ಅಮರಣಾಂತ ಉಪವಾಸ ಆರಂಭಿಸುವ ಮೂಲಕ ನೌಕರರಿಗೆ ಬೆಂಬಲ ಸೂಚಿಸಿದರು. ಅವರು ಉಪವಾಸ ನಿರತರಾಗಿರುವ ಮಾಹಿತಿ ಅರಿತ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಯೋವೃದ್ದರಾದ ವಿಶ್ವನಾಥ್ ರೈ ಅವರನ್ನು ಮನವೊಲಿಸಿ ಅಮರಣಾಂತ ಉಪವಾಸವನ್ನು ಕೈ ಬಿಡುವಂತೆ ಮಾಡುವಲ್ಲಿ ಯಶಸ್ವಿಯಾದರು. 

ಈ ಸಂದರ್ಭದಲ್ಲಿ ಪುತ್ತೂರು ವಿಭಾಗ ಕೆಎಸ್‍ಆರ್‍ಟಿಸಿ ಮಜ್ದೂರ್ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಗಿರೀಶ್ ಮಳಿ, ಪ್ರಧಾನ ವಕ್ತಾರ ಶಾಂತರಾಮ ವಿಟ್ಲ, ರಾಮಚಂದ್ರ ಅಡಪ, ವೆಂಕಟ್ರಮಣ ಭಟ್, ಮಹಾಬಲ ಗಡಿಮಾರ್, ಸಂಜೀವ ಗೌಡ ಮತ್ತಿತರರು ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News