ಲಸಿಕೆ ಕಡ್ಡಾಯ ಹೇರಿಕೆ ಕುರಿತು ಸ್ಪಷ್ಟೀಕರಣ ನೀಡುವಂತೆ ಡಿಸಿ, ಮನಪಾ ಆಯುಕ್ತರಿಗೆ ಡಾ.ಶ್ರೀನಿವಾಸ್‌ ಕಕ್ಕಿಲ್ಲಾಯ ಪತ್ರ

Update: 2021-10-26 18:07 GMT

ಮಂಗಳೂರು : ಕೋವಿಡ್‌ ಲಸಿಕೆ ಹಾಕಿಸದವರಿಗೆ ಚಿತ್ರಮಂದಿರಗಳಿಗೆ ಪ್ರವೇಶವಿಲ್ಲ, ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳು ಎಲ್ಲಾದರೂ ಕಂಡು ಬಂದರೆ ಅಂತವರನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಮುಂತಾದ ಆದೇಶಗಳಿರುವ ಮಂಗಳೂರು ಮಹಾನಗರ ಪಾಲಿಕೆಯ ಸಹಿಯುಳ್ಳ ನೋಟಿಸ್‌ ಕಂಡು ಬರುತ್ತಿದ್ದು, ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ್‌ ಕಕ್ಕಿಲ್ಲಾಯ ಜಿಲ್ಲಾಧಿಕಾರಿ ಹಾಗೂ ಮನಪಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಅವರು ಬರೆದ ಪತ್ರದ ಪೂರ್ಣಪಠ್ಯ ಇಲ್ಲಿದೆ

ಮಾನ್ಯ ಜಿಲ್ಲಾಧಿಕಾರಿಗಳು, ದಕ ಜಿಲ್ಲೆ ಇವರ ದಿನಾಂಕ ಅಕ್ಟೋಬರ್ 13, 2021ರ ಆದೇಶ ಸಂ. ಎಂಎಜಿ(2) ಸಿಆರ್ 156/2021/133465/ಸಿ4/47 ಮತ್ತು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ ಎಂಬ ಸಹಿಯುಳ್ಳ, ದಿನಾಂಕ 22-10-2021 ಎಂದು ನಮೂದಿತವಾಗಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಪತ್ರಗಳ ಬಗ್ಗೆ ನನ್ನ ಆತಂಕವನ್ನು ವ್ಯಕ್ತಪಡಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ.

ಮೇಲೆ ಉಲ್ಲೇಖಿಸಿದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಕೋವಿಡ್ ಲಸಿಕೆ ಪಡೆಯದವರು ಚಿತ್ರಮಂದಿರಗಳನ್ನು ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ. ಮಹಾನಗರಪಾಲಿಕೆ ಆಯುಕ್ತರದೆನ್ನಲಾದ ಪತ್ರದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಸತಿ ಸಮುಚ್ಚಯ, ಅಪಾರ್ಟ್‌ಮೆಂಟ್, ಮಾಲ್, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಇರುವ ನಾಗರಿಕರು ಕಂಡು ಬಂದಿದ್ದಾರೆಂದೂ, ಈ ಸಮುಚ್ಚಯ/ಸಂಸ್ಥೆಗಳ ವೆಲ್ಫೇರ್ ಸೊಸೈಟಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಲಸಿಕೆ ಪಡೆಯದವರನ್ನು ಗುರುತಿಸಲು ಮ.ನ.ಪಾ ಜೊತೆ ಕೈ ಜೋಡಿಸಬೇಕೆಂದೂ, ಕೈ ಜೋಡಿಸದೇ ಅಸಹಕಾರ ತೋರಿದಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳುವುದು  ಅನಿವಾರ್ಯ ವಾಗಲಿದೆ ಎಂದೂ, ಮೂರನೇ ಅಲೆ ತಡೇಯಲು ಇದೆಲ್ಲ ಅಗತ್ಯವೆಂದೂ ಹೇಳಲಾಗಿದೆ.

ಇಂಥ ಆದೇಶಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ರೂಪಿಸಿರುವ ನೀತಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದ್ದು, ಲಸಿಕೆ ಹಾಕಿಸಿಕೊಳ್ಳದವರತ್ತ ತಾರತಮ್ಯವೆಸಗಿ, ಅಪರಾಧಿಗಳಂತೆ ಬಿಂಬಿಸಿ ಸಮಾಜದಿಂದ ಹೊರಗುಳಿಸುವ ಕೆಲಸಗಳಾಗಿವೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಐಚ್ಛಿಕವೆಂದು ಕೇಂದ್ರ ಸರಕಾರವು ಹಲವು ಸಲ ಅತಿ ಸ್ಪಷ್ಟವಾಗಿ ತಿಳಿಸಿದ್ದು, ಅನೇಕ ಉಚ್ಚ ನ್ಯಾಯಾಲಯಗಳಲ್ಲಿ ಅದನ್ನೇ ಸ್ಪಷ್ಟ ಪಡಿಸಿ ಹೇಳಿಕೆಗಳನ್ನು ಸಲ್ಲಿಸಿದೆ; ಅಕ್ಟೋಬರ್ 8, 2021ರಂದು ಗೋವಾ ಉಚ್ಚ ನ್ಯಾಯಾಲಯದೆದುರು ಸಲ್ಲಿಸಿರುವ ಹೇಳಿಕೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಐಚ್ಛಿಕವೆಂದೂ, ಎಲ್ಲರೂ ಹಾಕಿಸಿಕೊಳ್ಳು ವುದು ಅಪೇಕ್ಷಣೀಯವೆನ್ನುವುದನ್ನಷ್ಟೇ ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿದೆಯೆಂದೂ, ಆದರೆ ಹೀಗೆ ಪ್ರಚಾರ ಮಾಡಿರುವುದು ಯಾರೊಬ್ಬರಿಗೂ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಲಸಿಕೆ ಹಾಕಿಸಬೇಕೆಂದು ಅರ್ಥವಲ್ಲವೆಂದೂ, ಲಸಿಕೆ ಹಾಕುವ ವಿಚಾರದಲ್ಲಿ ನಾಗರಿಕರೊಳಗೆ ಯಾವುದೇ ವಿಧದಲ್ಲಿ ತಾರತಮ್ಯ ಮಾಡಕೂಡದೆಂದೂ ಅತ್ಯಂತ ಸ್ಪಷ್ಟವಾಗಿ ಹೇಳಿದೆ.

ಕರ್ನಾಟಕ ಸರಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಯವರು ಸೆಪ್ಟೆಂಬರ್ 2, 2021ರಂದು ಹೊರಡಿಸಿರುವ ಸುತ್ತೋಲೆಯಲ್ಲೂ ಕೋವಿಡ್ ಲಸಿಕೆ ಹಾಕುವುದನ್ನು ಯಾವುದೇ ಕಾರ್ಯಕ್ರಮ/ಯೋಜನೆಗಳಿಗೆ ಜೋಡಿಸಿಲ್ಲವೆಂದೂ, ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಜನರಿಗೆ ಯಾವುದೇ ನಿರ್ಬಂಧನೆ ಹೇರದೆ ಜಾಗೃತಿ ಅಭಿಯಾನದ ಮೂಲಕ ನಡೆಸಬೇಕೆಂದೂ ಸ್ಪಷ್ಟವಾಗಿ ಹೇಳಲಾಗಿದೆ.

ಹೀಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್ ಲಸಿಕೆಯು ಕಡ್ಡಾಯವಲ್ಲ, ಐಚ್ಛಿಕ ಮಾತ್ರವೆಂದೂ, ಲಸಿಕೆ ಹಾಕಿಸಿಕೊಳ್ಳು ವಂತೆ ಬಲವಂತ ಮಾಡಲು ಸಾಧ್ಯವಿಲ್ಲವೆಂದೂ ಸುಸ್ಪಷ್ಟವಾಗಿ ಹೇಳಿರುವಾಗ ತಳಮಟ್ಟದ ಅಧಿಕಾರಿಗಳು ಇದನ್ನು ಮೀರಿ ಜನರು ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಇಲ್ಲವಾದಲ್ಲಿ ಶಿಕ್ಷಾರ್ಹವಾಗುತ್ತದೆ, ಪ್ರವೇಶ ನಿರಾಕರಿಸಲಾಗುತ್ತದೆ, ಲಸಿಕೆ ಹಾಕಿಸಿಕೊಳ್ಳದವರು ಅಪರಾಧಿಗಳು, ಅವರನ್ನು ಗುರುತಿಸಲು ಇತರರು ನೆರವಾಗಬೇಕು, ಇಲ್ಲವಾದರೆ ಅವರ ಮೇಲೂ  ಕ್ರಮ ಕೈಗೊಳ್ಳಲಾಗುವುದು ಎಂದೆಲ್ಲ ಮನಬಂದಂತೆ ಆದೇಶ ಹೊರಡಿಸುತ್ತಿರುವುದು ಅಘಾತಕಾರಿಯಾಗಿದೆ, ಮಾತ್ರವಲ್ಲ, ಕಾನೂನು ಬಾಹಿರವೂ, ಅಸಾಂವಿಧಾನಿಕವೂ, ಅವೈಜ್ಞಾನಿಕವೂ, ಅತಾರ್ಕಿಕವೂ ಆಗಿದೆ.

ಕೋವಿಡ್ ಲಸಿಕೆಯನ್ನು ಪಡೆಯದಿರಲು ಅನೇಕ ಕಾರಣಗಳಿದ್ದು, ಲಸಿಕೆ ಉತ್ಪಾದಕ ಕಂಪೆನಿಗಳೇ ಅಂಥವನ್ನು ಪಟ್ಟಿ ಮಾಡಿವೆ. ಇತ್ತೀಚೆಗೆ ಕೋವಿಡ್ ತಗಲಿದವರು ಮೂರು ತಿಂಗಳು ಲಸಿಕೆ ಪಡೆಯುವಂಟಿಲ್ಲ ಎಂದು ಸರಕಾರವೇ ಹೇಳಿದ್ದು, ಸೋಂಕಿನ ಕಾರಣಕ್ಕೆ ಹತ್ತು ದಿನ ಪ್ರತ್ಯೇಕವಿದ್ದರೆ, ಲಸಿಕೆ ಪಡೆಯಲಾಗದ ಕಾರಣಕ್ಕೆ ಹಲವು ತಿಂಗಳು ಬಹಿಷ್ಕೃತರಾಗಬೇಕಾದ ವಿಲಕ್ಶಃಅಣವಾದ ಸನ್ನಿವೇಶಕ್ಕೆ ಇಂಥ ಆದೇಶಗಳು ಎಡೆ ಮಾಡುತ್ತವೆ. ಹದಿನೆಂಟಕ್ಕಿಂತ ಕೆಳಗಿನವರು ಲಸಿಕೆಯನ್ನು ಪಡೆಯುವುದೇ ಅಸಾಧ್ಯವಾಗಿರುವಾಗ ಹೀಗೆ ಪ್ರವೇಶ ನಿರ್ಬಂಧವು ಅವರನ್ನಷ್ಟೇ ಅಲ್ಲ, ಅವರ ಜೊತೆಗೆ ಹೋಗಲಾಗದೆ ಅವರ ಕುಟುಂಬದವರನ್ನೂ ಹೊರಗುಳಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಲಸಿಕೆ ಪಡೆದವರಲ್ಲೂ ಕೊರೋನ ಸೋಂಕುಂಟಾಗುವ ಮತ್ತು ಅವರಿಂದ ಇತರರಿಗೆ ಹರಡುವ ಎಲ್ಲಾ ಸಾಧ್ಯತೆಗಳಿವೆ ಎನ್ನುವುದು ಈಗ ನಿಚ್ಚಳವಾಗಿರುವಾಗ, ದೇಶದಲ್ಲೂ, ರಾಜ್ಯದಲ್ಲೂ ಈಗಾಗಲೇ 75% ಕ್ಕೂ ಹೆಚ್ಚು ಜನರು ಸೋಂಕಿತರಾಗಿ ಮೂರನೇ ಅಲೆಯ ಸಾಧ್ಯತೆಯು ಅತಿ ಕ್ಷೀಣವೆಂದು ಎಲ್ಲಾ ತಜ್ಞರೂ ಹೇಳುತ್ತಿರುವಾಗ, ಬರಲಾರದ ಮೂರನೇ ಅಲೆಯನ್ನು ತಡೆಯುವುದಕ್ಕೆಂದು ಸೋಂಕನ್ನು ತಡೆಯದ ಲಸಿಕೆಯನ್ನು ಒತ್ತಾಯಿಸುವುದು, ಅದನ್ನು ಪಡೆಯದವರನ್ನು ಅಪರಾಧಿಗಳಾಗಿಸಿ ಹೊರಗುಳಿಸುವುದು ಅತಾರ್ಕಿಕವೂ, ಅವೈಜ್ಞಾನಿಕವೂ, ಅನ್ಯಾಯವೂ ಆಗುತ್ತದೆ.

ಯಾವುದೇ ವ್ಯಕ್ತಿಯು ಲಸಿಕೆ ಪಡೆದಿರುವನೋ ಇಲ್ಲವೋ ಎಂದು ವಿಚಾರಣೆ ನಡೆಸುವ ಯಾವುದೇ ಅಧಿಕಾರ ಅಥವಾ ಹೊಣೆಗಾರಿಕೆಯು ಯಾವುದೇ ಸಂಸ್ಥೆ ಯಾ ಸೊಸೈಟಿಗಳ ಮುಖ್ಯಸ್ಥರಿಗಾಗಲೀ, ಪದಾಧಿಕಾರಿಗಳಿಗಾಗಲೀ ಇಲ್ಲವೇ ಇಲ್ಲ. ಹಾಗೆ ಮಾಡುವುದು ವ್ಯಕ್ತಿಗತ ಗೋಪ್ಯತೆಯ ಹಕ್ಕಿನ ಉಲ್ಲಂಘನೆಯಷ್ಟೇ ಅಲ್ಲ, ಈ ಪದಾಧಿಕಾರಿಗಳಿಗೆ ಬೇರೊಬ್ಬರ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು, ಕಿರಿಕಿರಿ ಮಾಡಲು ಅಥವಾ ಬೆದರಿಕೆ ಹಾಕಲು ಅವಕಾಶವಾಗುತ್ತದೆ. ಇದರಿಂದಾಗಿ ಪರಸ್ಪರ ವೈಮನಸ್ಯಕ್ಕೂ, ಇತರ ಸಮಸ್ಯೆಗಳಿಗೂ ದಾರಿಯಾಗುವ ಸಾಧ್ಯತೆಗಳೂ ಇವೆ.

ನಮ್ಮ ದೇಶದಲ್ಲಿ ಲಸಿಕೆ ಹಾಕುತ್ತಿರುವುದು ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ. ಸ್ವಾತಂತ್ರ್ಯ ಪೂರ್ವದಲ್ಲೂ, ನಂತರದ ಈ 75 ವರ್ಷಗಳಲ್ಲೂ ಸಿಡುಬು, ಪೋಲಿಯೋ, ಡಿಪಿಟಿ ಇತ್ಯಾದಿ ಅನೇಕ ಲಸಿಕೆಗಳನ್ನು ಯಾವುದೇ ಬಲವಂತವಿಲ್ಲದೆ  ಬೆದರಿಸುವ ತಂತ್ರವಿಲ್ಲದೆ, ಬಹು ಯಶಸ್ವಿಯಾಗಿ ನೀಡಲಾಗಿದೆ. ಹಾಗಿರುವಾಗ ಅವೆಲ್ಲಕ್ಕಿಂತಲೂ ಬಹಳಷ್ಟು ಕಡಿಮೆ ತೀವ್ರತೆಯ ಈ ಕೋವಿಡ್ ರೋಗದೆದುರು ಲಸಿಕೆಯನ್ನು ನೀಡುವುದಕ್ಕೆ ಹೀಗೆ ನೀತಿ-ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಬೆದರಿಸಿ ಬಲವಂತ ಮಾಡುತ್ತಿರುವುದು ಸರಿಯೆನಿಸದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ಪಷ್ಟವಾಗಿ ಹೇಳಿರುವಂತೆ ಲಸಿಕೆಯ ಪ್ರಯೋಜನಗಳ ಬಗ್ಗೆ ಜನಜಾಗೃತಿ ಮಾಡಿಸುವುದಷ್ಟೇ ಸರಕಾರದ ಪ್ರಯತ್ನವಾಗಿರಬೇಕೇ ಹೊರತು ಜನರನ್ನು ಬೆದರಿಸುವುದಾಗಬಾರದು. ಜನರ ಮನವೊಲಿಸುವಲ್ಲಿ ಆಡಳಿತಗಳು ಅನುಭವಿಸರಬಹುದಾದ ವೈಫಲ್ಯಗಳನ್ನು ಮುಚ್ಚಿ ಹಾಕಲು, ಮತ್ತು ತಮ್ಮ ಹೊಣೆಗಾರಿಕೆಯನ್ನು ಇತರರಿಗೆ ದಾಟಿಸಲು ಹೀಗೆ ಸಂಘಸಂಸ್ಥೆಗಳವರ ಮೇಲೆ ಒತ್ತಡ ಹೇರುತ್ತಿರುವುದು ಸರಿಯಾಗದು.

ಆದ್ದರಿಂದ ಇಂಥ ಆದೇಶಗಳನ್ನು ಈ ಕೂಡಲೇ ಹಿಂಪಡೆದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲ್ಕಾಣಿಸಿದ ನೀತಿಗಳನು ಸಾರವಷ್ಟೇ ಕಾರ್ಯನಿರ್ವಹಿಸಬೇಕೆಂದೂ, ಈ ಬಗ್ಗೆ ಈ ಕೂಡಲೇ ಸ್ಪಷ್ಟೀಕರಣವನ್ನು ಪ್ರಕಟಿಸಬೇಕೆಂದೂ ಆಗ್ರಹಿಸುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News