ಪೆಗಾಸಸ್ ಗೂಢಚರ್ಯೆ ಭಾರತೀಯ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ:ರಾಹುಲ್ ಗಾಂಧಿ

Update: 2021-10-27 12:45 GMT

ಹೊಸದಿಲ್ಲಿ: ಪೆಗಾಸಸ್  ಗೂಢಚರ್ಯೆ ಭಾರತೀಯ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಬೇಹುಗಾರಿಕೆಗಾಗಿ ಇಸ್ರೇಲಿ ಸ್ಪೈವೇರ್‌ನ ಬಳಕೆಯ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೂವರು ಸದಸ್ಯರ ಸೈಬರ್ ತಜ್ಞರ ಸಮಿತಿಯನ್ನು ನೇಮಿಸಿದ ಗಂಟೆಗಳ ನಂತರ ರಾಹುಲ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪೆಗಾಸಸ್ ಭಾರತೀಯ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಪೆಗಾಸಸ್ ದೇಶ ಮತ್ತು ದೇಶದ ಸಂಸ್ಥೆಗಳ ಮೇಲಿನ ದಾಳಿಯಾಗಿದೆ. ಸುಪ್ರೀಂ ಕೋರ್ಟ್ ಸಮಿತಿಯು ಸತ್ಯವನ್ನು ಹೊರತರುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು "ಯಾವ ಸಂಸ್ಥೆಯು ಪೆಗಾಸಸ್ ಅನ್ನು ಖರೀದಿಸಿದೆ" ಎಂದು ಉತ್ತರಿಸಬೇಕೆಂದು ಕಾಂಗ್ರೆಸ್ ನಾಯಕ ಒತ್ತಾಯಿಸಿದರು. ಕಳೆದ ಸಂಸತ್ ಅಧಿವೇಶನದಲ್ಲಿ ನಾವು ಪೆಗಾಸಸ್ ವಿಷಯವನ್ನು ಪ್ರಸ್ತಾಪಿಸಿದ್ದೆವು, ಇಂದು ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ನೀಡಿ ನಾವು ಹೇಳುತ್ತಿರುವುದನ್ನು ಬೆಂಬಲಿಸಿದೆ ಎಂದರು.

 "ನಾವು ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಯಾರು ಪೆಗಾಸಸ್ ಅನ್ನು ಅಧಿಕೃತಗೊಳಿಸಿದರು. ಅದನ್ನು ಯಾರ ವಿರುದ್ಧ ಬಳಸಲಾಯಿತು ಹಾಗೂ ಬೇರೆ ಯಾವುದೇ ದೇಶಕ್ಕೆ ನಮ್ಮ ಜನರ ಮಾಹಿತಿ ತಲುಪಿದೆಯೇ?"ಎಂದು ಕೇಳಿದ್ದಾರೆ.

ಈ ವಿಚಾರವನ್ನು ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಇಷ್ಟಪಡುವುದಿಲ್ಲ ಎಂದು ನನಗೆ ಖಾತ್ರಿಯಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಮುಖ್ಯಮಂತ್ರಿಗಳು,ಮಾಜಿ ಪ್ರಧಾನಿಗಳು ಮತ್ತು ಬಿಜೆಪಿಯ ಸಚಿವರ ವಿರುದ್ಧ ಪೆಗಾಸಸ್ ಅನ್ನು ಬಳಸಲಾಯಿತು. ಪೆಗಾಸಸ್ ಬಳಕೆಯ ಮೂಲಕ ಪಡೆದ ಡೇಟಾವನ್ನು ಪ್ರಧಾನಿ ಹಾಗೂ  ಗೃಹ ಸಚಿವರು ಪಡೆಯುತ್ತಿದ್ದಾರೆಯೇ? ಮುಖ್ಯ ಚುನಾವಣಾ ಆಯುಕ್ತರು  ಹಾಗೂ ವಿರೋಧ ಪಕ್ಷದ ನಾಯಕರ ಫೋನ್ ಕದ್ದಾಲಿಕೆಯ ಮಾಹಿತಿಯು ಪ್ರಧಾನಿಗೆ ಹೋಗುತ್ತಿದ್ದರೆ, ಅದು ಕ್ರಿಮಿನಲ್ ಕೃತ್ಯವಾಗಿದೆ”ಎಂದು ವಯನಾಡ್ ಸಂಸದರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News