ಕೆನಡಾದ ರಕ್ಷಣಾ ಸಚಿವರಾಗಿ ಭಾರತೀಯ ಮೂಲದ ಅನಿತಾ ಆನಂದ್ ನೇಮಕ

Update: 2021-10-27 17:51 GMT
photo:twitter/@AnitaOakville

ಟೊರಂಟೊ, ಅ.27: ಕೆನಡಾದ ಸಚಿವ ಸಂಪುಟವನ್ನು ಮಂಗಳವಾರ ಪುನರ್‌ರಚಿಸಲಾಗಿದ್ದು ನೂತನ ರಕ್ಷಣಾ ಸಚಿವರಾಗಿ ಭಾರತೀಯ ಮೂಲದ ಕೆನಡಾ ರಾಜಕಾರಣಿ ಅನಿತಾ ಆನಂದ್‌ರನ್ನು ನೇಮಿಸಲಾಗಿದೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ ಲಿಬರಲ್ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರ ನಡೆಸಲು ಜನಾದೇಶ ಪಡೆದ ಸುಮಾರು 1 ತಿಂಗಳ ಬಳಿಕ ಸಚಿವ ಸಂಪುಟವನ್ನು ಪುನರ್‌ರಚಿಸಲಾಗಿದೆ. ಸುದೀರ್ಘಾವಧಿಯಿಂದ ರಕ್ಷಣಾ ಸಚಿವರಾಗಿದ್ದ , ಭಾರತೀಯ ಮೂಲದ ಹರ್ಜೀತ್ ಸಜ್ಜನ್‌ರನ್ನು ಅಂತರಾಷ್ಟ್ರೀಯ ಅಭಿವೃದ್ಧಿ ಇಲಾಖೆ  ಯ ಸಚಿವರನ್ನಾಗಿ ನೇಮಿಸಲಾಗಿದೆ. ರಕ್ಷಣಾ ಪಡೆಯಲ್ಲಿ ಲೈಂಗಿಕ ಹಗರಣದ ಕುರಿತ ಆರೋಪವನ್ನು ಸೂಕ್ತವಾಗಿ ನಿರ್ವಹಿಸಲು ವಿಫಲವಾದ ಹಿನ್ನೆಲೆಯಲ್ಲಿ ಸಜ್ಜನ್‌ರನ್ನು ರಕ್ಷಣಾ ಇಲಾಖೆಯಿಂದ ವರ್ಗಾಯಿಸಲಾಗಿದೆ.

ಇವರ ಸ್ಥಾನದಲ್ಲಿ ಅನಿತಾರನ್ನು ನೇಮಿಸುವ ಮೂಲಕ ಲೈಂಗಿಕ ಹಗರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಂತ್ರಸ್ತರಿಗೆ ಬಲವಾದ ಸಂದೇಶ ನೀಡುವ ಉದ್ದೇಶ ಸರಕಾರದ್ದಾಗಿದೆ. ಕೆನಡಾದ ರಕ್ಷಣಾ ವ್ಯವಸ್ಥೆಯಲ್ಲಿ ಲೈಂಗಿಕ ಹಗರಣದ ಬಗ್ಗೆ ಹಲವು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಕ್ಷಣಾ ವ್ಯವಸ್ಥೆಗೆ ನೂತನ ಸ್ವರೂಪ ನೀಡಬೇಕೆಂಬ ತೀವ್ರ ಆಗ್ರಹ ರಾಜಕೀಯ ವಲಯ ಹಾೂ ಜನಸಮೂಹದಿಂದ ವ್ಯಕ್ತವಾಗಿದೆ.

2019ರಲ್ಲಿ ಪ್ರಥಮ ಬಾರಿಗೆ ಸಂಸದೆಯಾಗಿ ಆಯ್ಕೆಗೊಂಡಿದ್ದ ಅನಿತಾ ಆನಂದ್, ಈ ಬಾರಿಯ ಚುನಾವಣೆಯಲ್ಲಿ ಓಕ್‌ವಿಲ್ಲೆ ಕ್ಷೇತ್ರದಿಂದ ಸುಮಾರು 46% ಮತ ಪಡೆದು ಗೆಲುವು ಸಾಧಿಸಿದ್ದಾರೆ. ಈ ಹಿಂದಿನ ಸರಕಾರದಲ್ಲಿ ಸಾರ್ವಜನಿಕ ಸೇವೆ ಮತ್ತು ಖರೀದಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಕೊರೋನ ಸೋಂಕಿನ ಸಂದರ್ಭದಲ್ಲಿ ತಮ್ಮ ಅತ್ಯುತ್ತಮ ನಿರ್ವಹಣೆಯಿಂದ ಜನಪಿ್ರಯವಾಗಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ಲಿಂಗ ಸಮತೋಲನ ಕಾಯ್ದುಕೊಳ್ಳಲಾಗಿದೆ ಮತ್ತು 38 ಸಚಿವರನ್ನು ಹೊಂದಿದೆ ಎಂದು ಮೂಲಗಳನ್ನು ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News