ಬ್ರಿಟನ್: ಕೊರೋನ ನಿಯಂತ್ರಿಸಲು ರೂಪಿಸಿದ್ದ ಯೋಜನೆಯಿಂದ 37 ಬಿಲಿಯನ್ ಪೌಂಡ್ ವ್ಯರ್ಥ ; ಸಂಸತ್ ಸಮಿತಿ ವರದಿ

Update: 2021-10-27 18:11 GMT

ಲಂಡನ್, ಅ.27: ಬ್ರಿಟನ್ ಸರಕಾರ ಕಳೆದ ವರ್ಷ ಕೊರೋನ ಸೋಂಕು ತಡೆಗಟ್ಟುವ ಉದ್ದೇಶದಿಂದ ರೂಪಿಸಲಾಗಿದ್ದ ಪತ್ತೆ ಮತ್ತು ಪರೀಕ್ಷೆ ಕಾರ್ಯಕ್ರಮ ವಿಫಲಗೊಂಡಿದ್ದರಿಂದ ಸುಮಾರು 37 ಬಿಲಿಯನ್ ಪೌಂಡ್‌ನಷ್ಟು ಮೊತ್ತ ವ್ಯರ್ಥವಾಗಿದೆ ಎಂದು ಬ್ರಿಟನ್ ಸಂಸದರ ವರದಿಯೊಂದು ತಿಳಿಸಿದೆ.

ಸರಕಾರ ಮತ್ತು ಈ ಯೋಜನೆಯ ಅನನುಭವಿ ಮುಖ್ಯಸ್ಥರಾಗಿದ್ದ ಡಿಡೊ ಹಾರ್ಡಿಂಗ್ ಏನನ್ನಾದರೂ ಸಾಧಿಸಬೇಕೆಂಬ ಅತ್ಯುತ್ಸಾಹ ಪ್ರದರ್ಶಿಸಿದ್ದರು. ಆದರೆ ಅಂತಿಮವಾಗಿ ಇದು ಕೇವಲ ಅತಿಯಾದ ಭರವಸೆಯಾಗಿಯೇ ಉಳಿಯಿತು ಮತ್ತು ಭಾರೀ ಮೊತ್ತದ ಹಣ ವ್ಯರ್ಥವಾಯಿತು . ಇವರಿಬ್ಬರು ಸರಕಾರಿ ಸ್ವಾಮ್ಯದ ರಾಷ್ಟ್ರೀಯ ಆರೋಗ್ಯ ಸೇವೆಯ ಬದಲು ದುಬಾರಿ ವೆಚ್ಚದ ಖಾಸಗಿ ಗುತ್ತಿಗೆದಾರರ ನೆರವು ಪಡೆದರು ಎಂದು ಬ್ರಿಟನ್ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಯೋಜನೆಯಡಿ ಕೊರೋನ ಸೋಂಕಿನ ಲಕ್ಷಣವಿದ್ದ ಕೆಲವೇ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟಾರೆ, ಈ ಯೋಜನೆಯ ಪ್ರಮುಖ ಉದ್ದೇಶವಾದ ಕೊರೋನ ಸೋಂಕಿನ ಸರಪಳಿ ತುಂಡರಿಸುವ ಗುರಿ ತಲುಪಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.

ಇದು ಆತಂಕದ ವಿಷಯವಾಗಿದ್ದು ತೆರಿಗೆ ಪಾವತಿದಾರರನ್ನು ಎಟಿಎಂ ವ್ಯವಸ್ಥೆಯಂತೆ ಪರಿಗಣಿಸಲಾಗಿದೆ . ತೆರಿಗೆ ಪಾವತಿದಾರರ ನಿಧಿಯನ್ನು ಸೂಕ್ತ ರೀತಿಯಲ್ಲಿ ಬಳಸುವ ಬಗ್ಗೆ ಗಮನ ಹರಿಸದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವಿಪಕ್ಷ ಲೇಬರ್ ಪಕ್ಷದ ಸಂಸದೆ ಮೆಗ್ ಹೀಲಿಯರ್ ಹೇಳಿದ್ದಾರೆ.

ಆದರೆ ನೂತನ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಸರಕಾರ, ಇದರಿಂದ ಯುರೋಪ್‌ನ ಇತರ ದೇಶಗಳಿಗಿಂತ ಬ್ರಿಟನ್‌ನಲ್ಲಿ ಹೆಚ್ಚು ಮಂದಿ ಪರೀಕ್ಷೆಯ ಪ್ರಯೋಜನ ಪಡೆಯುವಂತಾಗಿದೆ ಎಂದಿದೆ. ಈ ಯೋಜನೆಯಿಂದ ಪ್ರತೀ ದಿನ ಹಲವು ಮಂದಿಯ ಪ್ರಾಣ ಉಳಿಸುವ ಜೊತೆ, ಕೊರೋನ ಸೋಂಕು ಹರಡುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಪ್ರಸರಣದ ಸರಪಳಿ ತುಂಡರಿಸಲು ನೆರವಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಸುರಕ್ಷಾ ಏಜೆನ್ಸಿಯ ವುುಖ್ಯಸ್ಥ ಜೆನ್ನೀ ಹ್ಯಾರಿಸ್ ಹೇಳಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ ಬ್ರಿಟನ್‌ನಲ್ಲಿ ಕೊರೋನ ಸೋಂಕಿನ ಪ್ರಕರಣ ಉಲ್ಬಣಗೊಂಡಿದ್ದಾಗ ಬ್ರಿಟನ್ ಸರಕಾರ ಹೊಸ ಪ್ರಕರಣಗಳನ್ನು ಪತ್ತೆಹಚ್ಚುವ ಮತ್ತು ಸೋಂಕಿತ ವ್ಯಕ್ತಿಗಳನ್ನು ಪರೀಕ್ಷಿಸುವ ಸಾಮೂಹಿಕ ಅಭಿಯಾನಕ್ಕೆ ಚಾಲನೆ ನೀಡಿತ್ತು. ಆದರೂ ಸೋಂಕು ಪ್ರಕರಣ ಒಂದೇ ಸಮನೆ ಹೆಚ್ಚಿದ್ದರಿಂದ ಯುರೋಪ್‌ನಲ್ಲಿ ರಶ್ಯಾದ ಬಳಿಕ ಕೊರೋನ ಸೋಂಕಿನಿಂದ ಅತ್ಯಧಿಕ ಸಾವು ಸಂಭವಿಸಿದ ದೇಶವಾಗಿದೆ ಬ್ರಿಟನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News