ಹಿರೋಶಿಮಾ ಬಾಂಬ್ ದಾಳಿಯಲ್ಲಿ ಬದುಕುಳಿದಿದ್ದ ಸುನಾವೊ ಸುಬೊಯಿ ನಿಧನ

Update: 2021-10-27 18:27 GMT

ಟೋಕ್ಯೊ, ಅ.27: ಜಪಾನ್‌ನ ಹಿರೋಶಿಮಾ ನಗರದ ಮೇಲೆ ನಡೆದಿದ್ದ ಬಾಂಬ್ ದಾಳಿಯಲ್ಲಿ ಬದುಕುಳಿದಿದ್ದ, ಆ ಬಳಿಕ ಪರಮಾಣು ಅಸ್ತ್ರಗಳನ್ನು ವಿರೋಧಿಸುವುದನ್ನೇ ಜೀವನದ ಸಂದೇಶವನ್ನಾಗಿಸಿಕೊಂಡಿದ್ದ 96 ವರ್ಷದ ಸುನಾವೊ ಸುಬೊಯಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಸುಬೊಯಿ ಹಿರೋಶಿಮಾದ ಆಸ್ಪತ್ರೆಯಲ್ಲಿ ರವಿವಾರ ನಿಧನರಾಗಿದ್ದಾರೆ. ಅನೀಮಿಯಾದಿಂದ ಹೃದಯ ಬಡಿತದಲ್ಲಿ ಏರುಪೇರಾಗಿ ತೀವ್ರ ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು ಎಳೆದಿದ್ದಾರೆ ಎಂದು , ಸುಬೊಯಿ ಅಧ್ಯಕ್ಷರಾಗಿದ್ದ ನಿಹೋನ್ ಹಿದಂಕ್ಯೊ(ಹಿರೋಶಿಮಾ, ನಾಗಸಾಕಿ ಬಾಂಬ್ ದಾಳಿಯಲ್ಲಿ ಬದುಕುಳಿದವರ ಸಂಸ್ಥೆ) ಬುಧವಾರ ಹೇಳಿಕೆ ನೀಡಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 2016ರಲ್ಲಿ ಜಪಾನ್‌ಗೆ ನೀಡಿದ್ದ ಚಾರಿತ್ರಿಕ ಭೇಟಿಯ ಸಂದರ್ಭದಲ್ಲಿ ಅವರನ್ನು ಸುಬೊಯಿ ಭೇಟಿಯಾಗಿದ್ದರು. ಈ ಸಂದರ್ಭ ಇಬ್ಬರೂ ದಿೀರ್ಘಾವಧಿಯ ಹಸ್ತಲಾಘವ ನೀಡಿದ್ದರು.

1945ರ ಆಗಸ್ಟ್ 6ರಂದು, ದ್ವಿತೀಯ ವಿಶ್ವಯುದ್ಧದ ಸಂದರ್ಭ ಅಮೆರಿಕದ ವಾಯುಪಡೆ ಹಿರೋಶಿಮಾದ ಮೇಲೆ ಅಣುಬಾಂಬ್ ದಾಳಿ ನಡೆಸಿದ್ದಾಗ ಸುಬೊಯಿ 20 ವರ್ಷದ ಯುವಕರಾಗಿದ್ದರು. ಬಾಂಬ್ ದಾಳಿಯಿಂದ ತೀವ್ರ ಸುಟ್ಟಗಾಯಕ್ಕೆ ಒಳಗಾಗಿದ್ದ ಅವರ ಕಿವಿಯ ಒಂದು ಭಾಗ ಪೂರ್ಣ ಸುಟ್ಟುಹೋಗಿತ್ತು. 40 ದಿನ ಪ್ರಜ್ಞಾಹೀನರಾಗಿದ್ದ ಅವರು ಆ ಬಳಿಕಜ ಚೇತರಿಸಿಕೊಂಡರೂ ತೀವ್ರ ನಿಶ್ಯಕ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News