​ಕೋವಿಡ್ ಬಳಿಕ ದೆಹಲಿಗೆ ಈಗ ಡೆಂಗ್ಯೂ ಭೀತಿ

Update: 2021-10-28 03:46 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪ್ರಸಕ್ತ ಋತುವಿನಲ್ಲಿ ಇಲ್ಲಿನ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ 10 ಮಂದಿ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ದೃಢಪಡಿಸಿದೆ.

ಈ ಪೈಕಿ ಮಹಿಳೆಯೊಬ್ಬರು ದೆಹಲಿಯ ನಿವಾಸಿಯಾಗಿದ್ದು, ಉಳಿದವರು ಇತರ ರಾಜ್ಯಗಳಿಗೆ ಸೇರಿದವರು ಎಂದು ಹೇಳಿದೆ. ವಿವಿಧ ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಪಾಲಿಕೆ ಕೇವಲ ದೆಹಲಿ ನಿವಾಸಿಗಳ ಸಾವನ್ನು ಮಾತ್ರ ಲೆಕ್ಕ ಹಾಕುವ ಕಾರಣ ಡೆಂಗ್ಯೂಗೆ ರಾಜಧಾನಿಯಲ್ಲಿ ಬಲಿಯಾದವರು ಇಬ್ಬರು ಮಾತ್ರ ಎಂದು ಪಾಲಿಗೆ ಸ್ಪಷ್ಟನೆ ನೀಡಿದೆ. ಈ ಎರಡೂ ಸಾವುಗಳು ಸೆಪ್ಟೆಂಬರ್‌ನಲ್ಲಿ ಸಂಭವಿಸಿವೆ ಎಂದು ಅಧಿಕಾರಿಗಳು ಸಬೂಬು ಹೇಳಿದ್ದಾರೆ.

ಕೆಲ ಆಸ್ಪತ್ರೆಗಳು ಪಾಲಿಕೆಗೆ ಡೆಂಗ್ಯೂ ಸಾವಿನ ಬಗ್ಗೆ ವರದಿ ಮಾಡಿದ್ದು, ಈ ಬಗ್ಗೆ ತನಿಖೆ ನಡೆದಿದೆ. ಇದು ಡೆಂಗ್ಯೂವಿನಿಂದ ಸಂಭವಿಸಿದ ಸಾವು ಎಂದು ದೃಢಪಟ್ಟಲ್ಲಿ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಕಳೆದ ಎರಡು ವಾರಗಳಲ್ಲಿ ರಾಜಧಾನಿಯಲ್ಲಿ ಮತ್ತು ಸುತ್ತಮುತ್ತಲ ಪಟ್ಟಣಗಳಲ್ಲಿ ಡೆಂಗ್ಯೂ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಕೊರತೆ ಉಂಟಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಎಐಐಎಂಎಸ್, ರಾಮ ಮನೋಹರ ಲೋಹಿಯಾ, ಲೋಕನಾಯಕ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ ಗಂಗಾ ರಾಮ್, ಅಪೋಲೊ, ಮ್ಯಾಕ್ಸ್ ಮತ್ತಿತರ ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳಿಗೆ ಹಾಸಿಗೆಯನ್ನು ನಿಯತವಾಗಿ ಹೆಚ್ಚಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. "ಪ್ರಸ್ತುತ ಆಸ್ಪತ್ರೆಯಲ್ಲಿ 30 ಡೆಂಗ್ಯೂ ರೋಗಿಗಳಿದ್ದು, ಬಹುತೇಕ ಮಂದಿ ತೀವ್ರ ರೋಗಲಕ್ಷಣ ಹೊಂದಿದ್ದಾರೆ" ಎಂದು ಏಮ್ಸ್ ವೈದ್ಯ ಡಾ.ಅಶುತೋಶ್ ಬಿಸ್ವಾಸ್ ಹೇಳಿದ್ದಾರೆ.

ಲೋಕನಾಯಕ ಆಸ್ಪತ್ರೆಯಲ್ಲಿ 41 ಡೆಂಗ್ಯೂ ರೋಗಿಗಳಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ಜ್ವರದಿಂದಾಗಿ ಓಪಿಡಿಗೆ ಭೇಟಿ ನೀಡಿದ್ದ 190 ರೋಗಿಗಳ ರಕ್ತ ಮಾದರಿಗಳನ್ನು ಡೆಂಗ್ಯೂ ಪರೀಕ್ಷೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಂಗಾರಾಂ ಆಸ್ಪತ್ರೆಯಲ್ಲಿ 60 ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಗ್ಯೂ ವಾರ್ಡ್ ಭರ್ತಿಯಾಗಿದ್ದು, ಫ್ಲೂ ವಾರ್ಡ್‌ನಲ್ಲಿ ಲಭ್ಯವಿರುವ ಜಾಗದಲ್ಲಿ ಈಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಬ್ಯೋತ್ರಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News