ಉಡುಪಿ: ಬಾವಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾರ್ಮಿಕನ ರಕ್ಷಣೆ

Update: 2021-10-28 10:56 GMT

ಉಡುಪಿ, ಅ.28: ಬಾವಿ ಕೆಲಸಕ್ಕೆ ಇಳಿದು ಮೇಲಕ್ಕೇರಲಾಗದೆ ಜೀವನ್ಮರಣ ಸ್ಥಿತಿಯಲ್ಲಿದ್ದ ಕೇರಳ ಮೂಲದ ಕಾರ್ಮಿಕನನ್ನು ಉಡುಪಿ ಅಗ್ನಿಶಾಮಕದಳದ ತಂಡ ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ಉಡುಪಿ ನಿಟ್ಟೂರಿನ ಆಭರಣ ಮೋಟಾರ್ಸ್‌ ಬಳಿ ನಡೆದಿದೆ.

ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಸುಮಾರು 35 ಅಡಿ ಆಳ (25 ಅಡಿ ನೀರು)ದ ಬಾವಿಗೆ ಕ್ಲೀನಿಂಗ್ ಕೆಲಸಕ್ಕಾಗಿ ಕೇರಳ ಮೂಲದ ಪ್ರದೀಪ್ (34) ಎಂಬವರು ಇಳಿದಿದ್ದರು. ಅಲ್ಲಿ ಕೆಲಸ ಮುಗಿಸಿದ ಬಳಿಕ ಮೇಲಕ್ಕೆ ಬರಲಾಗದೆ ಅವರು ತೀವ್ರ ಅಸ್ವಸ್ಥಗೊಂಡರು. ಮಾಹಿತಿ ತಿಳಿದು ಉಡುಪಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸತೀಶ್ ಎನ್. ನೇತೃತ್ವದ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿತು.

ಬಾವಿಯೊಳಗೆ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾರ್ಮಿಕನನ್ನು ಅಗ್ನಿಶಾಮಕ ದಳದ ಚಾಲಕ ಸುಧೀರ್ ಬಾವಿಗೆ ಇಳಿದು ಪ್ರದೀಪ್‌ನನ್ನು ಮೇಲಕ್ಕೆತ್ತಿ ರಕ್ಷಿಸಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸತೀಶ್, ರವಿ ನಾಯ್ಕ, ವಿನಾಯಕ ಕಲ್ಮನೆ ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News