ಕ್ರೈಸ್ತರ ಮೇಲಿನ ದಾಳಿ: ಎಸ್‌ಡಿಪಿಐ ವಿರೋಧ

Update: 2021-10-28 10:42 GMT

ಮಂಗಳೂರು, ಅ.28: ರಾಜ್ಯದ ನಾನಾ ಕಡೆಗಳಲ್ಲಿ ಕ್ರೈಸ್ತ ಸಮುದಾಯದ ಧರ್ಮ ಗುರುಗಳು, ಚರ್ಚ್, ಸೇವಾ ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಸುಳ್ಳು ಕೇಸುಗಳನ್ನು ದಾಖಲಿಸಿ ಕ್ರೈಸ್ತ ಧಾರ್ಮಿಕ ಮುಖಂಡರುಗಳನ್ನು ಬಂಧಿಸುತ್ತಿರುವ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ವಿರೋಧಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪನ್ಸೋ ಫ್ರಾಂಕೊ ಹೇಳಿದರು.

ಅವರು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿರುವ ಕ್ರೈಸ್ತ ಸಮುದಾಯ ಶಿಕ್ಷಣ, ಆರೋಗ್ಯ ಮೊದಲಾದ ಸೇವಾ ಸಂಸ್ಥೆಗಳಲ್ಲಿ ಲಕ್ಷಾಂತರ ಹಿಂದೂ, ಮುಸ್ಲಿಮರು ಪ್ರಯೋಜನ ಪಡೆದಿದ್ದಾರೆ. ಎಲ್ಲಿಯೂ ಮತಾಂತರಕ್ಕೆ ಒತ್ತಾಯ, ಪ್ರೇರಣೆ ನೀಡಿದ ಉದಾಹರಣೆ ಇಲ್ಲ. ಸುಳ್ಳು ಆರೋಪ ಹೋರಿಸಿ ಬಿಜೆಪಿ ಬೆಂಬಲಿತ ಸಂಘಟನೆಗಳು ಕ್ರೈಸ್ತರ ವಿರುದ್ಧ ದಾಳಿ, ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದರು.

ರಾಜ್ಯ ಸರಕಾರ ಕೇವಲ ಕ್ರೈಸ್ತರ ಪ್ರಾರ್ಥನಾ ಮಂದಿರ, ಧರ್ಮಗುರುಗಳು, ಆಸ್ತಿಪಾಸ್ತಿಗಳ ಸರ್ವೆ ನಡೆಸಲು ಅಧಿಕಾರಿಗಳಿಗೆ ಆದೇಶ ನೀಡಿರುವುದು ಸರಿಯಲ್ಲ. ಸರಕಾರ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ರಾಜ್ಯ ಉಪಾಧ್ಯಕ್ಷ, ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್ ಆಗ್ರಹಿಸಿದರು.

ಕ್ರೈಸ್ತ ಸಂಘಟನೆಗಳ ಕಾನೂನು ಹೋರಾಟ ಮತ್ತು ಶಾಂತಿಯುತ ಪ್ರತಿಭಟನೆಗಳಿಗೆ ಎಸ್.ಡಿ.ಪಿಐ ಬೆಂಬಲಿಸುತ್ತದೆ. ನ.20ರಂದು ಕ್ರೈಸ್ತ ಸಂಘಟನೆಗಳು ಬೆಂಗಳೂರಿನಲ್ಲಿ ಹಮ್ಮಿಕೊಂಡ ವಿಧಾನ ಸಭಾ ಚಲೋ ಹೋರಾಟಕ್ಕೆ ಪಕ್ಷ ಬೆಂಬಲ ನೀಡುತ್ತದೆ ಎಂದು ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಮ್ ಹಸನ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಮತ್ತು ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News