ಮಲ್ಪೆ ಕಡಲ ಮಧ್ಯೆ ಮೊಳಗಿದ ‘ಕನ್ನಡಕ್ಕಾಗಿ ನಾವು’ ಗೀತಾ ಗಾಯನ

Update: 2021-10-28 12:43 GMT

ಉಡುಪಿ, ಅ.28: ಶೃಂಗಾರಗೊಂಡ ಬೋಟು ನೀಲ ಸಮುದ್ರ ಮಧ್ಯೆ ನೀರನ್ನು ಸೀಳಿಗೊಂಡು ಸಾಗುತ್ತಿದ್ದರೆ, ಅದರೊಳಗೆ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಡುಗಳು ಕಲಾವಿದರ ಕಂಠಗಳಿಂದ ಮೊಳಗುತ್ತಿದ್ದವು.

ಹೀಗೆ ಮಲ್ಪೆ ಸಮುದ್ರ ಮಧ್ಯೆ ‘ಕನ್ನಡಕ್ಕಾಗಿ ನಾವು’ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ಮೂಡಿಬಂದವು. ಉಡುಪಿ ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್, ಐಲ್ಯಾಂಡ್ ಬೋಟ್ ಮಾಲಕರ ಸಹಕಾರದೊಂದಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗುರುವಾರ ಕನ್ನಡಕ್ಕಾಗಿ ನಾವು ಲಕ್ಷಕಂಠಗಳ ಗೀತಾ ಗಾಯನ ಕಾರ್ಯಕ್ರಮವನ್ನು ಮಲ್ಪೆ ಸಮುದ್ರ ಮಧ್ಯೆ ಆಯೋಜಿಸಲಾಗಿತ್ತು.

ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವ ಜಟ್ಟಿಯಿಂದ ಹೊರಟ ಎರಡು ಬೋಟುಗಳು ಸುಮಾರು ಆರು ನಾಟೇಕಲ್ ದೂರದ ವ್ಯಾಪ್ತಿಯಲ್ಲಿ ಸಂಚರಿಸಿತು. ನಾಡಗೀತೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಮೊದಲು ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ..., ಬಳಿಕ ಕವಿ ನಿಸಾರ್ ಅಹ್ಮದ್ ಅವರ ನಿತ್ಯೋತ್ಸವ..., ತದನಂತರ ರಾಜಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು...ಕನ್ನಡ ಹಾಡುಗಳನ್ನು ಹಾಡಲಾಯಿತು.ಕಲಾವಿದರ ಕಲಾವತಿ ದಯಾನಂದ, ಭಾರದ್ವಾಜ್, ಸಿರಿಕಂಠದಲ್ಲಿ ಮೊಳಗಿದ ಹಾಡುಗಳಿಗೆ ವಿದ್ಯಾರ್ಥಿಗಳು, ಶಿಕ್ಷಕರು, ಗಣ್ಯರು ಧ್ವನಿಗೂಡಿಸಿದರು.

ಈ ಮೂಲಕ ಬೋಟಿನಲ್ಲಿದ್ದ ವಿದ್ಯಾರ್ಥಿಗಳು, ಗಣ್ಯರು ಹಾಗೂ ಮೀನುಗಾರಿಕಾ ಬೋಟುಗಳಲ್ಲಿ ಸಾಗುತ್ತಿದ್ದ ಮೀನುಗಾರರಲ್ಲಿಯೂ ಕನ್ನಡ ಪ್ರೇಮವನ್ನು ಜಾಗೃತ ಗೊಳಿಸಲಾಯಿತು. ಒಟ್ಟಾರೆಯಾಗಿ ಬೋಟಿನಲ್ಲಿಯೇ ಒಂದೂವರೆ ಗಂಟೆಗಳ ಕಾಲ ನಡೆದ ಇಡೀ ಕಾರ್ಯ ಕ್ರಮವು ಕನ್ನಡಮಯವಾಗಿತ್ತು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಬೋಟಿನಲ್ಲಿದ್ದ ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು. ಸಮೀಪದ ಬೋಟುಗಳಲ್ಲಿ ಮೀನುಗಾರಿಕಾ ವೃತ್ತಿ ನಡೆಸುತ್ತಿದ್ದ ಮೀನುಗಾರರು ಹೆಜ್ಜೆ ಹಾಕಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ವಾರ್ತಾಧಿಕಾರಿ ಮಂಜುನಾಥ್ ಬಿ. ಉಪಸ್ಥಿತರಿದ್ದರು. ಕುಮಾರ್ ಬೆಕ್ಕೇರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News