ರಜತಾದ್ರಿಯಲ್ಲಿ ಸಮೂಹ ಕಂಠದಲ್ಲಿ ಮೊಳಗಿತು ಕನ್ನಡ ಹಾಡುಗಳು

Update: 2021-10-28 14:07 GMT

ಮಣಿಪಾಲ, ಅ.28: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಇಂದು ‘ಕನ್ನಡಕ್ಕಾಗಿ ನಾವು’ ಅಭಿಯಾನದಂಗವಾಗಿ ಮಣಿಪಾಲದ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡ ಮೂರು ಕನ್ನಡ ಹಾಡುಗಳ ಸಮೂಹ ಗಾಯನದಲ್ಲಿ ಪ್ರಬಾರ ಜಿಲ್ಲಾಧಿಕಾರಿ ಹಾಗೂ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಬೆಳಗ್ಗೆ 11 ಗಂಟೆಗೆ ಸರಿಯಾಗಿ ಕುವೆಂಪು ಅವರ ನಾಡಗೀತೆಯೊಂದಿಗೆ ಗೀತಗಾಯನ ಪ್ರಾರಂಭಗೊಂಡಿದ್ದು, ಬಳಿಕ ಸಮೂಹ ಗಾಯನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಕೆ.ಎಸ್. ನಿಸ್ಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ..’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಲಾಯಿತು.

‘ಜಿಲ್ಲಾ ಆಡಳಿತ ಸಂಕೀರ್ಣ ರಜತಾದ್ರಿಯಲ್ಲಿ ಇಂದು 500ಕ್ಕೂ ಹೆಚ್ಚು ಮಂದಿ ಸೇರಿ ನಾವಿಂದು ಮೂರು ಕನ್ನಡ ಹಾಡುಗಳನ್ನು ಹಾಡಿದ್ದೇವೆ. ಇದೇ ರೀತಿ ಇಂದು ಪ್ರತಿ ಗ್ರಾಪಂ ಮಟ್ಟದಲ್ಲಿ ಹಾಗೂ ಉಡುಪಿಯ ಕ್ಷೇತ್ರಗಳಾದ ಶ್ರೀಕೃಷ್ಣ ಮಠ, ಮಲ್ಪೆ ಸೀವಾಕ್, ಕಾಪು ಬೀಚ್, ಲೈಟ್‌ಹೌಸ್ ಸೇರಿದಂತೆ 20ಕ್ಕೂ ಅಧಿಕ ಪ್ರೇಕ್ಷಣಿಕ ಸ್ಥಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.’ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ನವೀನ್ ಭಟ್ ಕಾರ್ಯಕ್ರಮದ ಬಳಿಕ ನುಡಿದರು.

ಇಡೀ ಜಿಲ್ಲೆಯಲ್ಲಿ ಸುಮಾರು 15ರಿಂದ 20 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ನಿರೀಕ್ಷೆ ಇದೆ. ಕನ್ನಡ ರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ ಆಯೋಜಿಸಿದ ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿ ಯಾಗಿ ನಡೆದಿದೆ ಎಂದೂ ಅವರು ನುಡಿದರು.

ಕುಂದಾಪುರದಲ್ಲಿ ಉಪವಿಭಾಗಾಧಿಕಾರಿ ರಾಜು ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಎಲ್ಲರೂ ಸಾಂಪ್ರದಾಯಿಕ ಉಡುಪಿನೊಂದಿಗೆ ಬಂದು ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News