ತುಂಬೆ ರೇಚಕ ಸ್ಥಾವರ ಉನ್ನತೀಕರಣ: ಮೇಯರ್ ಪರಿಶೀಲನೆ

Update: 2021-10-28 14:17 GMT

ಮಂಗಳೂರು, ಅ. 28: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಂಬೆ ರೇಚಕ ಸ್ಥಾವರವನ್ನು ಉನ್ನತೀಕರಣಗೊಳಿಸುವ ಯೋಜನೆಗೆ ಈಗಾಗಲೇ ಮಂಜೂರಾತಿ ದೊರಕಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿಯವರು ಗುರುವಾರದಂದು ತುಂಬೆ ರೇಚಕ ಸ್ಥಾವರಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಯೋಜನೆ ಕಾರ್ಯಗತಗೊಳಿಸಲು ಸರಿಸುಮಾರು 30-40 ದಿನಗಳ ಅಗತ್ಯವಿದೆ. ಆ ಸಂದರ್ಭದಲ್ಲಿ ಮಂಗಳೂರು ನಗರಕ್ಕೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ, ಆ ಅಡಚಣೆಯನ್ನು ತಪ್ಪಿಸುವ ಸಲುವಾಗಿ ಈಗಿರುವಂತಹ ಹೆಚ್ಚುವರಿ ಸ್ಟಾಂಡ್ ಬೈ ಪಂಪ್ ಗಳನ್ನು ಉಪಯೋಗಿಸುವ ನಿಟ್ಟಿನಲ್ಲಿ ಅದಕ್ಕೆ ಬೇಕಿರುವ ಕೊಳವೆ ಜೋಡಣೆಯ ಕಾಮಗಾರಿಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಈ ಕುರಿತು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿರುತತಿದೆ. ಇದಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಅ. 29ರಂದು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಭಾಗಶ: ಪಡೀಲ್, ಶಕ್ತಿನಗರ, ಮಂಗಳಾದೇವಿ, ಮೋರ್ಗನ್ಸ್ ಗೇಟ್, ಭಾಗಶ: ಪಾಂಡೇಶ್ವರ, ಭಾಗಶ: ಲೇಡಿಹಿಲ್ ಮತ್ತು ಬಿಜೈ ಕದ್ರಿ ಪ್ರದೇಶಗಳಿಗೆ ಅಪರಾಹ್ನದ ನಂತರ ನೀರು ಪೂರೈಕೆ ಮಾಡಲಾಗುವುದು ಎಂದು ಮೇಯರ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News