ಅ.30ರಂದು ವಿವಿಧ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಮಾಹಿತಿ ಕಾರ್ಯಾಗಾರ

Update: 2021-10-28 14:31 GMT

ಮಂಗಳೂರು ಅ.28: ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು, ಸಾಲದ ಅರ್ಜಿಗಳನ್ನು ಸ್ವೀಕರಿಸಲು, ಮಂಜೂರಾತಿ ಅಥವಾ ತಾತ್ವಿಕ ಮಂಜೂರಾತಿ ಪತ್ರಗಳನ್ನು ವಿತರಿಸಲು, ಸರಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಲು, ಸಾಲ ಸೌಲಭ್ಯ ಗಳ ಮಾಹಿತಿ ಕಾರ್ಯಾಗಾರವನ್ನು ಇದೇ ಅ.30ರಂದು ಸಂಸದ ನಳಿನ್ ಕುಮಾರ್ ಕಟೀಲು ಅವರ ನಿರ್ದೇಶನದ ಮೇರೆಗೆ ಬಂಟ್ವಾಳದ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ್ ಖೂಬಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಯು. ಅಧ್ಯಕ್ಷತೆ ವಹಿಸುವರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಅಂಗಾರ ಎಸ್., ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಬ್ಯಾಂಕು, ಡಿಸಿಸಿಬಿ, ಎಂಎಫ್‌ಗಳು, ಎಸ್‌ಬಿಎಫ್‌ಸಿಗಳು, ನಬಾರ್ಡ್ ಮತ್ತು ಕೆವಿಐಸಿ, ಕೆವಿಐಬಿಡಿಐಸಿ ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಇತರೆ ಸರಕಾರಿ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ಪಿಎಂಎಂವೈ (ಮುದ್ರಾ), ಸ್ಟ್ಯಾಂಡ್ ಆಪ್ ಇಂಡಿಯಾ, ಪಿಎಂ ಸ್ವನಿಧಿ, ಇಸಿಎಲ್‌ಜಿಎಸ್, ಪಿಎಂಇಜಿಪಿ, ಕೃಷಿ ಮೂಲಸೌಕರ್ಯ ವಿಧಿ ಯೋಜನೆ (ಎಐಎಫ್), ಪಶು ಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆ (ಎಎಚ್‌ಐಡಿಎಸ್), ಕೃಷಿ ಅಭಿವೃದ್ಧಿ ಸಾಲಗಳು, ಶಿಕ್ಷಣ, ವಸತಿ ಸಾಲಗಳು ಮತ್ತು ಇತರ ಆತ್ಮನಿರ್ಭರ ಭಾರತ್ ಯೋಜನೆಗಳಾದ ಪಿಎಂಎಸ್‌ಬಿವೈ, ಪಿಎಂಜೆಜೆಬಿವೈ, ಎಪಿವೈನಂತಹ ವಿವಿಧ ಪಿಎಂ ಆತ್ಮ ಸುರಕ್ಷಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಹಾಗೂ ಸಾಲ ಮಂಜೂರಾತಿಗಳ ಪತ್ರಗಳನ್ನು ವಿತರಿಸಲಾಗುವುದು ಎಂದು ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News