ಉಡುಪಿ ಜಿಲ್ಲೆ: 62,250 ಕಂಠಗಳಲ್ಲಿ ಏಕಕಾಲದಲ್ಲಿ ಮೊಳಗಿದ ಕನ್ನಡ ಕಂಪು

Update: 2021-10-28 15:00 GMT

ಉಡುಪಿ, ಅ.28: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಲಕ್ಷ ಕಂಠ ಗಾಯನ ಕಾರ್ಯಕ್ರಮದಡಿ, ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಸೇರಿದಂತೆ, ಕನ್ನಡದ ಶ್ರೇಷ್ಠತೆಯನ್ನು ಸಾರುವ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದ ಆವರಣ ಸೇರಿದಂತೆ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ 62,250 ಕಂಠಗಳಲ್ಲಿ ಹಾಡುವ ಮೂಲಕ ಜಿಲ್ಲೆಯಾದ್ಯಂತ ಕನ್ನಡದ ಕಂಪನ್ನು ಹರಡಲಾಯಿತು.

ಸಂಜೆ ದೊರೆತ ಅಧಿಕೃತ ಮಾಹಿತಿಯಂತೆ ಮಣಿಪಾಲದ ಜಿಲ್ಲಾಡಳಿತ ಸಂಕೀರ್ಣದ ಆವರಣದಲ್ಲಿ 750ಕ್ಕೂ ಅಧಿಕ ಮಂದಿಯಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ಉಳಿದಂತೆ ಜಿಲ್ಲೆಯ 155 ಗ್ರಾಪಂಗಳಲ್ಲಿ 10,500 ಮಂದಿ, ಎಲ್ಲಾ ತಾಲೂಕು ಕೇಂದ್ರ ಕಚೇರಿಗಳಲ್ಲಿ 1,650, ಎ ಮತ್ತು ಬಿ ವರ್ಗದ 46 ದೇವಸ್ಥಾನಗಳಲ್ಲಿ 1,450, ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 9,500, ಎಲ್ಲಾ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ 24,000, ಜಿಲ್ಲೆಯ ಮೂರು ಇಂಜಿನಿಯರಿಂಗ್ ಕಾಲೇಜು (ನಿಟ್ಟೆ, ಮೂಡ್ಲಕಟ್ಟೆ, ಬಂಟಕಲ್)ಗಳಲ್ಲಿ 2,600 ಹಾಗೂ ಮಾಹೆಯ ವಿವಿಧ ವಿದ್ಯಾಸಂಸ್ಥೆಗಳಲ್ಲಿ 450 ಮಂದಿ ಹಾಡಿನಲ್ಲಿ ಪಾಲ್ಗೊಂಡರು.

ಅಲ್ಲದೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಕಚೇರಿಗಳಲ್ಲಿ, ಮಾಲ್ ಮತ್ತು ಸಂಕೀರ್ಣಗಳಲ್ಲಿ 1,150 ಮಂದಿ,ಉಡುಪಿಯ ಭುಜಂಗ ಪಾರ್ಕ್‌ನಲ್ಲಿ 300, ಕಾಪು ಲೈಟ್‌ಹೌಸ್‌ನಲ್ಲಿ 800, ಮಲ್ಪೆ ಬೋಟಿನಲ್ಲಿ 200, ಮಲ್ಪೆ ಸೀವಾಕ್ ಮತ್ತು ಬಯಲು ರಂಗಮಂದಿರದಲ್ಲಿ 250, ಮಲ್ಪೆ ಸಮುದ್ರತೀರ, ಗಾಂಧಿ ಪ್ರತಿಮೆ ಬಳಿ 400,ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ 350, ಕಾರ್ಕಳ ಗೋಮಟೇಶ್ವರ ಬೆಟ್ಟದಲ್ಲಿ 350, ಕಾರ್ಕಳ ಚತುರ್ಮುಖ ಬಸದಿ 275, ಕೋಟ ಡಾ.ಶಿವರಾಮ ಕಾರಂತ ಥೀಮ್‌ಪಾರ್ಕ್ 120, ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 850, ಎಲ್ಲಾ ಕಾರ್ಖಾನೆಗಳಲ್ಲಿ 4,800, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ 200, ರಿಕ್ಷಾನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ 380, ಎಲ್ಲಾ ಬ್ಯಾಂಕ್‌ಗಳಲ್ಲಿ 850 ಹಾಗೂ ಆನೆಕೆರೆ ಜೈನ ಬಸದಿಯಲ್ಲಿ 75 ಮಂದಿ ಕನ್ನಡ ಹಾಡಿನಲ್ಲಿ ಧ್ವನಿಗೂಡಿಸಿದ್ದರು.

ಮಣಿಪಾಲದ ರಜತಾದ್ರಿಯಲ್ಲಿ ಪ್ರಬಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಪಂ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಹಾಗೂ ಮಣಿಪಾಲ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕಾಗಿ ಬಹುತೇಕ ಪುರುಷ ಸಿಬ್ಬಂದಿಗಳು ಬಿಳಿ ಬಣ್ಣದ ಶರ್ಟ್ ಮತ್ತು ಮಹಿಳಾ ಸಿಬ್ಬಂದಿಗಳು ಹಳದಿ ಬಣ್ಣದ ಉಡುಪುಗಳನ್ನು ಧರಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಕನ್ನಡವನ್ನು ಎಲ್ಲಾ ಸ್ಥಳದಲ್ಲಿ, ಎಲ್ಲಾ ಸಂದರ್ಭಗಳಲ್ಲೂ ಬಳಸುವುದಾಗಿ ಸಂಕಲ್ಪ ಕೈಗೊಳ್ಳಲಾಯಿತು.

ಜಿಲ್ಲೆಯ 155 ಗ್ರಾಪಂಗಳು ಸೇರಿದಂತೆ ಜಿಲ್ಲೆಯ 20 ಕ್ಕೂ ಅಧಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಗಾಯನ ಕಾರ್ಯಕ್ರಮ ನಡೆದಿದ್ದು, ಜಿಲ್ಲೆ ಯಾದ್ಯಂತ 63 ಸಾವಿರ ಮಂದಿ ಭಾಗವಹಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಡಾ.ನವೀನ್ ಭಟ್ ಹೇಳಿದರು. ಮಲ್ಪೆ ಕಡಲ ಮಧ್ಯದಲ್ಲಿ ಬೋಟ್‌ನಲ್ಲಿ 100 ಮಂದಿ ವೃತ್ತಪರ ಸಂಗೀತ ಕಲಾವಿದರಿಂದ ನಡೆದ ಕನ್ನಡ ಗೀತೆಗಳ ಗಾಯನ ಅತ್ಯಂತ ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News