ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಬೋಟು ಮುಳುಗಡೆ: ಆರು ಮಂದಿ ಮೀನುಗಾರರ ರಕ್ಷಣೆ

Update: 2021-10-28 16:14 GMT

ಮಲ್ಪೆ, ಅ.28: ಮೀನುಗಾರಿಕೆ ಮುಗಿಸಿ ವಾಪಾಸ್ಸು ಮಲ್ಪೆ ಬಂದರಿಗೆ ಬರುತ್ತಿದ್ದ ಬೋಟೋಂದು ಗುರುವಾರ ಕಲ್ಲಿಗೆ ಢಿಕ್ಕಿ ಹೊಡೆದು ಮುಳುಗಡೆಗೊಂಡಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಕಲ್ಯಾಣಪುರದ ಭಾರತಿ ತಿಂಗಳಾಯ ಎಂಬವರ ಮಾಲಕತ್ವದ ಶ್ರೀ ನವಶಕ್ತಿ ಹೆಸರಿನ ಬೋಟು ಅ.25ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುತ್ತಿದ್ದ ಬೋಟು ಮಲ್ಪೆ ಬಂದರಿನಿಂದ ಆರು ಮಾರು ಆಳ ದೂರದಲ್ಲಿ ಅಲೆಗಳ ಅಬ್ಬರಕ್ಕೆ ನಿಯಂತ್ರಣ ತಪ್ಪಿ ಕಲ್ಲಿಗೆ ಬಡಿಯಿತ್ತೆನ್ನಲಾಗಿದೆ. ಇದರಿಂದ ಬೋಟಿನ ಅಡಿಭಾಗ ಸಂಪೂರ್ಣ ಹಾನಿಗೊಂಡಿತು. ಪರಿಣಾಮ ನೀರು ಬೋಟಿನ ಒಳಹೊಕ್ಕು ಸಂಪೂರ್ಣ ಮುಳುಗುವ ಸ್ಥಿತಿಯಲ್ಲಿತ್ತು. ತಕ್ಷಣ ಸಮೀಪದಲ್ಲಿದ್ದ ನಿಶಾನ್, ಯಶ್ವಿನ್, ಕಾವೇರಿ, ಮಹಾಕಾಳಿ ಮತ್ತು ಚಿರಾಗ್ ಬೋಟಿವನರು ಅದರಲ್ಲಿದ್ದ ಮೀನುಗಾರರನ್ನು ರಕ್ಷಿಸಿ, ಬೋಟನ್ನು ಮಲ್ಪೆ ಬಂದರಿಗೆ ಎಳೆದು ತಂದಿದ್ದಾರೆ.

ಬೋಟಿನಲ್ಲಿ ಮೀನು ಸಹಿತ, ಬಲೆ ಹಾಗೂ ಇನ್ನಿತರ ಸಲಕರಣೆಗಳು ಸಮುದ್ರ ಪಾಲಾಗಿದೆ. ಇದರಿಂದ ಸುಮಾರು 20 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News