×
Ad

ಶೀಘ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪೂರ್ಣ ಪ್ರಮಾಣದ ಪ್ಲಾಸ್ಟಿಕ್ ಪಾರ್ಕ್: ಸಚಿವ ಭಗವಂತ ಖೂಬಾ

Update: 2021-10-29 14:57 IST

ಮಂಗಳೂರು, ಅ.29: ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಪಾರ್ಕ್ ಕಾರ್ಯನಿರ್ವಹಿಸಲು ಸಹಕಾರ ನೀಡುವುದಾಗಿ ಕೇಂದ್ರ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಭಗವಂತ ಜಿ. ಖೂಬಾ ತಿಳಿಸಿದ್ದಾರೆ.

ಅವರು ಇಂದು ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಜನೌಷಧಿ ಮಿತ್ರ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಾಜಿ ಕೇಂದ್ರ ಸಚಿವ ದಿ.ಅನಂತ ಕುಮಾರ್ ಪ್ರಸ್ತಾಪ ಮಾಡಿರುವ ಪ್ಲಾಸ್ಟಿಕ್ ಪಾರ್ಕ್ ಪೂರ್ಣ ಯೋಜನೆ ದ.ಕ. ಜಿಲ್ಲೆಯಲ್ಲಿ ಜಾರಿ ಮಾಡಲು ಈಗಾಗಲೇ ಅಧಿಕಾರಿಗಳು ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸರಕಾರ ಈಗಾಗಲೇ ಭರವಸೆ ನೀಡಿದಂತೆ ಶೀಘ್ರದಲ್ಲೇ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ಭಗವಂತ ಖೂಬ ತಿಳಿಸಿದ್ದಾರೆ.

*ಪ್ರತೀ ಜಿಲ್ಲೆಗೂ ಒಂದು ಸರಕಾರಿ ಮೆಡಿಕಲ್ ಕಾಲೇಜು, ರಾಜ್ಯಕ್ಕೆ ಒಂದು ಏಮ್ಸ್ ಮಾದರಿ ಕಾಲೇಜು:

ಭಾರತ ಸರಕಾರ ಪ್ರತೀ ಜಿಲ್ಲೆಯಲ್ಲೂ ಒಂದು ಮೆಡಿಕಲ್ ಕಾಲೇಜು ಸ್ಥಾಪಿಸಲು ನಿರ್ಧರಿಸಿದೆ ಮತ್ತು ದೇಶದ ಪ್ರತೀ ರಾಜ್ಯದಲ್ಲಿ ಏಮ್ಸ್ ಮಾದರಿಯ ವೈದ್ಯಕೀಯ ಕಾಲೇಜು ಆರಂಭಿಸುವ ಗುರಿ ಸರಕಾರದ ಮುಂದಿದೆ ಎಂದು ಭಗವಂತ ಖೂಬಾ ತಿಳಿಸಿದ್ದಾರೆ.

*ದೇಶದಲ್ಲಿ 8,400 ಜನೌಷಧಿ ಕೇಂದ್ರ

ದೇಶದಲ್ಲಿ 8,400 ಜನೌಷಧಿ ಕೇಂದ್ರಗಳ ಮೂಲಕ 14,051 ವಿವಿಧ ಔಷಧಿಗಳನ್ನು ಶೇ 70 ರಿಂದ ಶೇ 90 ರಿಯಾಯಿತಿ ದರದಲ್ಲಿ ಜನರಿಗೆ ನೀಡಲಾಗು ತ್ತಿದೆ. ಜನೌಷಧಿ ಕೇಂದ್ರಗಳ ಮೂಲಕ ಕಳೆದ ವರ್ಷ 665 ಕೋಟಿ ರೂ. ಆರ್ಥಿಕ ವ್ಯವಹಾರ ನಡೆದಿದೆ. ಈ ವರ್ಷ 800 ಕೋಟಿ ರೂ ಆರ್ಥಿಕ ವ್ಯವಹಾರ ಮಾಡುವ ಗುರಿ ಇದೆ. ದೇಶದಲ್ಲಿ ಇನ್ನಷ್ಟು ಜನೌಷಧಿ ಕೇಂದ್ರ ಗಳನ್ನು ತೆರಯುವ ಉದ್ದೇಶ ಸರಕಾರದ ಮುಂದಿದೆ ಎಂದು ಅವರು ವಿವರಿಸಿದರು.

*ಜನೌಷಧಿ ಕೇಂದ್ರದ ಮಾಹಿತಿಗಾಗಿ ಆ್ಯಪ್:

ಜನೌಷಧಿ ಕೇಂದ್ರಗಳ ಮಾಹಿತಿಯನ್ನು ಅಂತರ್ಜಾಲದ ಮೂಲಕ ನೀಡಲಾಗುವುದು ಮತ್ತು ಇದಕ್ಕಾಗಿ ಪ್ರತ್ಯೇಕ ಆ್ಯಪ್ ಒಂದನ್ನು ರಚಿಸಲಾಗುವುದು ಎಂದು ಸಚಿವ ಖೂಬಾ ತಿಳಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜನೌಷಧಿ ಕೇಂದ್ರವನ್ನು ಸೇವೆಯ ಉದ್ದೇಶದಿಂದ ಆರಂಭಿಸಿ ಜಿಲ್ಲೆಯಲ್ಲಿ 82 ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸಚಿವ ಅನಂತ ಕುಮಾರ್ ಅವರ ಮೂಲಕ ಜಿಲ್ಲೆಗೆ ಮಂಜೂರಾದ ಪ್ಲಾಸ್ಟಿಕ್ ಪಾರ್ಕ್ ಗೆ 40 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಪಾರ್ಕ್ ಕಾರ್ಯಾಚರಣೆ ಗೆ ಅನುದಾನ ಬಿಡುಗಡೆಗಾಗಿ ಸಚಿವರಲ್ಲಿ ಮನವಿ ಮಾಡಿದರು.

ಶಾಸಕ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಉಮಾನಾಥ ಕೋಟ್ಯಾನ್ , ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ನಿಗಮದ ಅಧ್ಯಕ್ಷರುಗಳಾದ ನಿತಿನ್ ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ, ದ.ಕ. ಡಿಎಚ್ಒ ಡಾ.ಕಿಶೋರ್ ಕುಮಾರ್, ಉಡುಪಿ ಡಿಎಚ್ಒ ಡಾ.ನಾಗಭೂಷಣ್ ಉಡುಪ ಹಾಗೂ ಪಿಎಂಬಿಐ ಜನೌಷಧಿ ಕೇಂದ್ರದ ಅಧಿಕಾರಿಗಳಾದ ಕುಂದನ್ ಸಿಂಗ್ ರವಿಕಾಂತ್ ತಿವಾರಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜನೌಷಧಿ ಮಿತ್ರ ಹಾಗೂ ಪ್ರಬುದ್ಧರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News