ಆಗುಂಬೆ ಘಾಟಿಯಲ್ಲಿ ಉರುಳಿ‌ ಬಿದ್ದ ಲಾರಿ: ನಾಲ್ವರು ಮೃತ್ಯು, ಐವರು ಗಂಭೀರ

Update: 2021-10-29 15:37 GMT

ಹೆಬ್ರಿ, ಅ.29: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟಿಯ ಐದನೇ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ನಡೆದ ಭೀಕರ ಲಾರಿ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಕಾರ್ಕಳ ಮೂಲದ ಲಾರಿ ಚಾಲಕ ಯಜ್ಜೇಶ್(30), ಕ್ಲೀನರ್ ಶ್ರೀಜಿತ್(18) ಲೋಡರ್‌ಗಳಾದ ಮಂಜುನಾಥ್(38) ಮತ್ತು ಮಣಿಕಂಠ (28) ಎಂದು ಗುರುತಿಸಲಾಗಿದೆ. ಇವರೆಲ್ಲರು ತಮಿಳುನಾಡು, ಎನ್.ಆರ್. ಪುರ ಸೇರಿದಂತೆ ವಿವಿಧ ಕಡೆಗಳ ನಿವಾಸಿಗಳಾಗಿದ್ದು, ಸದ್ಯ ಕಾರ್ಕಳದಲ್ಲೇ ವಾಸವಾಗಿದ್ದರು.

ಲಾರಿಯಲ್ಲಿದ್ದ ಗಣೇಶ್, ಮಂಜುನಾಥ ಗೌಡ, ಮಹದೇವ, ಸೈಯದ್ ಆಸೀಫ್, ನಾಗರಾಜ್ ತೀವ್ರವಾಗಿ ಗಾಯಗೊಂಡು ಮಣಿಪಾಲ ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರೆಲ್ಲರು ಕಾರ್ಕಳದಿಂದ ಈಚರ್ ಲಾರಿಯಲ್ಲಿ ಇಂಟರ್‌ಲಾಕ್ ತುಂಬಿ ಕೊಂಡು ಶಿಕಾರಿಪುರಕ್ಕೆ ತೆರಳಿದ್ದರು. ಅಲ್ಲಿ ಇಂಟರ್‌ಲಾಕ್ ಅಳವಡಿಸಿ, ವಾಪಾಸ್ಸು ಕಾರ್ಕಳಕ್ಕೆ ಬರುತ್ತಿರುವಾಗ ಲಾರಿಯು ಚಾಲಕನ ನಿಯಂತ್ರಣ ತಪ್ಪಿ, ಆಗುಂಬೆ ಘಾಟಿಯ ಸೋಮೇಶ್ವರ ಕಡೆಯಿಂದ ಬರುವ 5ನೇ ತಿರುವಿನ ರಸ್ತೆ ತೆಗೋಡೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಬಳಿಕ ಲಾರಿಯು ತಡೆಗೋಡೆಯನ್ನು ಮುರಿದು ಸುಮಾರು 50-60 ಅಡಿ ಆಳದ ಕಂದಕಕ್ಕೆ ಉರುಳಿಕೊಂಡು ಮಗುಚಿ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಲಾರಿಯಲ್ಲಿದ್ದ ಒಂಭತ್ತು ಮಂದಿ ಹೊರಗಡೆ ಎಸೆಯಲ್ಪಟ್ಟರು. ಇದರಲ್ಲಿ ನಾಲ್ವರು ಕಂದಕದಲ್ಲಿದ್ದ ಬಂಡೆಕಲ್ಲಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು.

ಉಳಿದವರನ್ನು ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಮೇಲಕ್ಕೇತ್ತಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ಕಾರ್ಕಳ ವೃತ್ತ ನಿರೀಕ್ಷಕ ಜಯಂತ್, ಹೆಬ್ರಿ ಠಾಣಾ ಎಸ್ಸೈ ಮಹೇಶ್ ಟಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗೃಹ ಸಚಿವರ ಸಂತಾಪ: ಆಗುಂಬೆ ಘಾಟಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಇಂತಹ ಅವಘಡಗಳು, ಮರುಕಳಿಸದಂತೆ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News