×
Ad

ಪರ್ಯಾಯ ಮಹೋತ್ಸವ: ಉಡುಪಿ ನಗರಾಭಿವೃದ್ಧಿಗೆ 30ಕೋಟಿ ರೂ. ಅನುದಾನಕ್ಕೆ ಪ್ರಸ್ತಾವ

Update: 2021-10-29 18:37 IST

ಉಡುಪಿ, ಅ.29: ಈ ಬಾರಿಯ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರಾಭಿವೃದ್ಧಿಗೆ 30ಕೋಟಿ ರೂ. ಅನುದಾನ ಒದಗಿಸುವಂತೆ ಉಡುಪಿ ನಗರಸಭೆಯಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದ್ದಾರೆ.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ದೀಪಾವಳಿ ಮುಗಿದ ಬಳಿಕ ಶಾಸಕರ ನೇತೃತ್ವದಲ್ಲಿ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಯನ್ನು ಮನವಿ ಮಾಡಲಾಗುವುದು. ಅದೇ ರೀತಿ ಹಳೆ ತಾಲೂಕು ಕಚೇರಿ ಆವರಣದಲ್ಲಿ ನಗರ ಸಭೆ ಕಚೇರಿ ನಿರ್ಮಿಸುವ ಕುರಿತು ಕೂಡ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ವಾರಾಹಿ ಪೈಪ್‌ಲೈನ್‌ಗೆ ಸಂಬಂಧಿಸಿ ರಸ್ತೆಗಳನ್ನು ಅಗೆದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಪರ್ಯಾಯದವರೆಗೆ ನಗರದ ಯಾವುದೇ ರಸ್ತೆಗಳನ್ನು ಅಗೆಯಬಾರದು ಎಂದು ತಾಕೀತು ಮಾಡಿದರು. ಅಗೆದ ರಸ್ತೆಯನ್ನು 15 ದಿನಗಳ ಒಳಗೆ ದುರಸ್ತಿ ಮಾಡಿಕೊಡಲಾಗುವುದೆಂದು ಅಧಿಕಾರಿ ಭರವಸೆ ನೀಡಿದರು.

ಕಾಗದ ರಹಿತ ಕಚೇರಿಗೆ ಸಿದ್ಧತೆ
ಇ ಖಾತೆಗೆ ಸಂಬಂಧಿಸಿದ ಫೈಲ್‌ಗಳನ್ನು ವಿಲೇವಾರಿ ಮಾಡಲು ಅಧಿಕಾರಿ ಗಳು ವಿಳಂಬ ಹಾಗೂ ಹಲವು ಫೈಲ್‌ಗಳು ಕಳೆದುಹೋಗಿರುವ ಕುರಿತು ಸದಸ್ಯರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು, ತಾಂತ್ರಿಕ ಸಮಸ್ಯೆ ಹಾಗೂ ಸಿಬ್ಬಂದಿ ಗಳ ಕೊರತೆಯಿಂದ ವಿಲೇವಾರಿ ವಿಳಂಬವಾಗುತ್ತಿದೆ. ಮುಂದೆ ಕಾಗದ ರಹಿತ ಕಚೇರಿಯಾದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು. ಫೈಲ್ ಕಳೆದು ಹೋಗಿಲ್ಲ. ಆದರೆ ಅದನ್ನು ಹುಡುಕುವುದು ಕಷ್ಟವಾಗುತ್ತದೆ. ನಗರಸಭೆ ಕಚೇರಿಯಲ್ಲಿ ಕಾಗದ ರಹಿತ ಕಚೇರಿ ಮೂಲಕ ಇ ಆಫೀಸ್ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ತಿಳಿಸಿದರು.

ಮಠದ ಗೇಟು ತೆರವು
ಅದಮಾರು ಮಠದ ಓಣಿಯಲ್ಲಿರುವ ನಗರಸಭೆ ರಸ್ತೆಗೆ ಮಠದವರು ಏಕಾ ಏಕಿ ಗೇಟು ಆಳವಡಿಸಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಗೇಟು ಆಳವಡಿಸಲು ಮಠದವರು ಯಾವುದೇ ಅನುಮತಿ ತೆಗೆದುಕೊಂಡಿಲ್ಲ. ಈ ಬಗ್ಗೆ ನೋಟೀಸ್ ನೀಡಲಾಗು ವುದು ಎಂದರು. ಈ ಸಂಬಂಧ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಬಂದಿದ್ದು, ಗೇಟು ಹಾಕದಂತೆ ಈ ಹಿಂದೆ ಸೂಚನೆ ನೀಡಿದ್ದೇವು. ಆದರೂ ಹಾಕಿರುವ ಗೇಟನ್ನು ತಕ್ಷಣವೇ ತೆರವುಗೊಳಿಸಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ಗೂಡಂಗಡಿ ಅನುಮತಿಗೆ ಆಕ್ಷೇಪ
ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಗೂಡಂಗಡಿಗಳಿಗೆ ಅನುಮತಿ ನೀಡಿರುವ ವಿಚಾರದ ಬಗ್ಗೆ ರಮೇಶ್ ಕಾಂಚನ್ ಹಾದೂ ಅಮೃತಾ ಕೃಷ್ಣಮೂರ್ತಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಠಿಯಿಂದ ಮಠದ ಖಾಸಗಿ ಜಾಗದಲ್ಲಿರುವ ಈ ಗೂಡಂಗಡಿಗಳ ನಿರ್ಮಾಣಕ್ಕೆ ಎನ್‌ಓಸಿ ನೀಡಿದ್ದೇವೆ ಎಂದು ತಿಳಿಸಿದರು.
ಖಾಸಗಿ ಜಾಗವಾಗಿದ್ದರೂ ಇಲ್ಲಿ ದಾರಿದೀಪ, ಡಾಮರೀಕರಣವನ್ನು ನಗರಸಭೆ ಮಾಡಿರುವುದರಿಂದ ನಗರಸಭೆ ಅನುಮತಿ ಇಲ್ಲದೆ ಗೂಡಂಗಡಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಅಮೃತಾ ಕೃಷ್ಣಮೂರ್ತಿ ತಿಳಿಸಿದರು. ಈ ವಿಚಾರದಲ್ಲೂ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರುಗಳ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆದವು.

ಮಾಜಿಗಳ ಹಸ್ತಕ್ಷೇಪ ಆರೋಪ: ವಾಗ್ವಾದ, ಗದ್ದಲ
ಮಾಜಿಗಳು ಹಸ್ತಕ್ಷೇಪ ಮಾಡಿ ಅಧ್ಯಕ್ಷರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಗಂಭೀರ ಆರೋಪಕ್ಕೆ ಸಂಬಂಧಿಸಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರುಗಳ ಮಧ್ಯೆ ಆರೋಪ ಪ್ರತ್ಯಾರೋಪಗಳು, ವಾಗ್ವಾದಗಳು ನಡೆದು ಇಡೀ ಸಭೆ ಗದ್ದಲಮಯವಾಯಿತು.

ಮಾಜಿಗಳೇ ನಗರಸಭಾ ಅಧಿಕಾರಿಗಳಿಗೆ ಕೆಲಸ ಮಾಡಲು ಸೂಚಿಸುತ್ತಿದ್ದಾರೆ. ಈ ಮೂಲಕ ಅಧ್ಯಕ್ಷರ ಅಧಿಕಾರವನ್ನು ಕಸಿಯುತ್ತಿದ್ದಾರೆ. ಅಧ್ಯಕ್ಷರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ರಮೇಶ್ ಕಾಂಚನ್ ಹೇಳಿದರು. ಇದಕ್ಕೆ ಆಕ್ರೋಶ ಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಮಾಜಿಗಳು ಹಾಗೂ ಆ ಅಧಿಕಾರಿ ಯಾರು ಎಂದು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು. ಸಮಯ ಬಂದಾಗ ದಾಖಲೆ, ಆಡಿಯೋ ಸಮೇತ ಬಿಡುಗಡೆ ಮಾಡಲಾಗು ವುದು ಎಂದು ರಮೇಶ್ ಕಾಂಚನ್ ಪ್ರತ್ಯುತ್ತರ ನೀಡಿದರು.

ಈ ವಿಚಾರವಾಗಿ ಸದಸ್ಯರುಗಳ ಮಧ್ಯೆ ವಾಗ್ವಾದ ಮುಂದುವರೆದು, ಆಡಳಿತ ಪಕ್ಷದ ಸದಸ್ಯರ ಹೇಳಿಕೆ ಬಗ್ಗೆ ರಮೇಶ್ ಕಾಂಚನ್ ಆಕ್ಷೇಪಿಸಿದರು. ಈ ರೀತಿ ಮಾತನಾಡಿದರೆ ನಾವು ಇದಕ್ಕೆ ಉತ್ತರ ಕೊಡಬೇಕಾದೀತು ಎಂದು ರಮೇಶ್ ಕಾಂಚನ್ ಎಚ್ಚರಿಸಿದರು. ಅದಕ್ಕೆ ಸದಸ್ಯ ಪ್ರಭಾಕರ ಪೂಜಾರಿ ಮೇಜು ಗುದ್ದಿ ಮತ್ತೆ ಗದ್ದಲ ಎಬ್ಬಿಸಿದರು. ಇವರೊಂದಿಗೆ ಇತರ ಸದಸ್ಯರು ರಮೇಶ್ ಕಾಂಚನ್ ಅವರ ಮೇಲೆ ವಾಗ್ದಾಳಿ ಮಾಡಿದರು. ಹೀಗೆ ಇವರುಗಳ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆದವು.

ಉಪಹಾರದಲ್ಲಿ ಭ್ರಷ್ಟಾಚಾರ: ಆರೋಪ
ನಗರಸಭೆ ಸಾಮಾನ್ಯ ಸಭೆಗೆ ನೀಡುವ ಒಂದು ಪ್ಲೇಟ್ ಉಪಹಾರಕ್ಕೆ 300 ರೂ. ಹಣ ಪಾವತಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು. ಇದರ ಹಿಂದೆ ಭ್ರಷ್ಟಾಚಾರ ವಾಸನೆ ಬಡಿಯುತ್ತಿದೆ ಎಂದು ಸದಸ್ಯರು ಆರೋಪಿಸಿದರು.

ಈ ಸಂಬಂಧ ಹೊಟೇಲ್ ಮಾಲಕರನ್ನು ಕರೆಸಿ ಪರಿಶೀಲನೆ ನಡೆಸಲಾಗು ವುದು ಎಂದು ಅಧ್ಯಕ್ಷರು ತಿಳಿಸಿದರು. ಹೊಟೇಲಿನಿಂದ ಹೊರಡುವ ಉಪಹಾರ ಇಲ್ಲಿಗೆ ಬರುವಾಗ ದುಬಾರಿಯಾಗುತ್ತಿದೆ. ಇದರಿಂದ ಭ್ರಷ್ಟಾಚಾರ ನಡೆದಿರ ಬಹುದು ಎಂದು ಕೃಷ್ಣರಾವ್ ಕೊಡಂಚ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News