ದೇರಳಕಟ್ಟೆ: 'ವಿಶ್ವ ಆತ್ಮಹತ್ಯೆ ತಡೆ ದಿನ' ಮತ್ತು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ
ಕೊಣಾಜೆ: ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆ ಜಾಗೃತಿಯ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು, ಕ್ಷೇಮ ಹೆಲ್ಪ್ ಲೈನ್ ಮೂಲಕ ಕಳೆದ ಎರಡು ವರ್ಷಗಳಿಂದ ನಿಟ್ಟೆ ವಿವಿ ಕ್ಯಾಂಪಸ್ ಸೇರಿದಂತೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸತೀಶ್ ಭಂಡಾರಿ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಆವರಣದಲ್ಲಿರುವ ಗ್ಲಾಸ್ ಹೌಸ್‍ನಲ್ಲಿ ಕ್ಷೇಮ ಮಾನಸಿಕ ಆರೋಗ್ಯ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನ ಮತ್ತು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಯುವ ಸಮುದಾಯದಲ್ಲಿ ಆತ್ಮಹತ್ಯೆಗಳು ಹೆಚ್ಚಾಗಿ ಮಾನಸಿಕ ಒತ್ತಡಗಳಿಂದ ಹೆಚ್ಚಾಗುತ್ತಿದೆ ಈ ನಿಟ್ಟಿನಲ್ಲಿ ನಿಟ್ಟೆ ವಿವಿಯಂತಹ ಕ್ಯಾಂಪಸ್‍ನಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಿಂದ, ಕೇಂದ್ರಾಡಳಿತ ಪ್ರದೇಶದಿಂದ ಆಗಮಿಸಿರುವ ಸುಮಾರು 4000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದು, ಈ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ನಿಟ್ಟೆ ವಿವಿ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದು, ಕ್ಯಾಂಪಸ್ ಮತ್ತು ಅದರ ಹೊರಗಡೆಯೂ ಆತ್ಮಹತ್ಯೆ ತಡೆಯಂತಹ ಜಾಗೃತಿ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ. ಪಿ.ಎಸ್. ಪ್ರಕಾಶ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ಕ್ಷೇಮ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹಿರೇಮಠ್, ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಯು.ಎಸ್. ಕೃಷ್ಣ ನಾಯಕ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ವೈಸ್ ಡೀನ್‍ಗಳಾದ ಡಾ. ಜಯಪ್ರಕಾಶ್ ಶಟ್ಟಿ, ಡಾ. ಅಮೃತ್ ಮಿರಾಜ್‍ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಸಾರ್ವಜನಿಕರಿಗೆ ಮತ್ತು ಯುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಿತ್ತಿಚಿತ್ರ ಸ್ಪರ್ಧೆ ಮತ್ತು ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಮಾನಸಿಕ ಆರೋಗ್ಯ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಶ್ರೀನಿವಾಸ ಭಟ್ ಯು. ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಸತೀಶ್ ರಾವ್ ಪ್ರಸ್ತಾವನೆಗೈದರು. ಡಾ. ಆ್ಯಗ್ನಿತಾ ಐಮನ್ ಕಾರ್ಯಕ್ರಮ ನಿರ್ವಹಿಸಿದರು. ಸುಮನ್ ಪಿಂಟೋ ಸ್ಪರ್ಧಾ ವಿಜೇತರ ವಿವರ ನೀಡಿದರು. ಡಾ. ಜೋನಾಥನ್ ಎಲ್. ವಂದಿಸಿದರು.