×
Ad

ಭ್ರಷ್ಠಾಚಾರ ನಿರ್ಮೂಲನೆಯಿಂದ ಮಾತ್ರ ದೇಶದ ಆಭಿವೃಧ್ದಿ ಸಾಧ್ಯ: ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ

Update: 2021-10-29 19:28 IST

ಉಡುಪಿ, ಅ.29:ದೇಶದ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ಅಭಿವೃದ್ದಿ ಗೆ ಭ್ರಷ್ಠಾಚಾರವು ಪ್ರಮುಖ ಅಡಚಣೆಯಾಗಿದ್ದು, ಇದರ ನಿರ್ಮೂಲನೆಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗಲಿದೆ. ಹೀಗಾಗಿ ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಎ ಹೇಳಿದ್ದಾರೆ.

ಶುಕ್ರವಾರ ಉಡುಪಿಯ ಅಬಕಾರಿ ಭವನದಲ್ಲಿ, ಜಾಗೃತ ಅರಿವು ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಸರಕಾರಿ ಕಚೇರಿಗಳಲ್ಲಿ, ಸಮಾಜದಲ್ಲಿ ಭ್ರಷ್ಠಾಚಾರ ಆಳವಾಗಿ ಬೇರೂರಿದ್ದು, ಕೆಟ್ಟ ಪಿಡುಗು ಆಗಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲಾ ನಾಗರಿಕರು, ಸರಕಾರಿ ನೌಕರರು ಒಟ್ಟಾಗಿ ಕೆಲಸ ಮಾಡಬೇಕಿದೆ. ನೌಕರರು ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬಕ್ಕೆ ಆಸ್ಪದ ನೀಡದೇ,ಸಕಾಲದಲ್ಲಿ ಪ್ರಾಮಾಣಿಕವಾಗಿ ಮಾಡಿಕೊಡಬೇಕು. ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಮುಂದಿನ ಪೀಳಿಗೆಗೆ ಸ್ಪೂರ್ತಿ ಮತ್ತು ಆದರ್ಶಪ್ರಾಯವಾಗಬೇಕು. ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಲೋಕಾಯುಕ್ತ ಸಂಸ್ಥೆಯೊಂದಿಗೆ ಸಮಾಜದ ಎಲ್ಲರೂ ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣದ ಕುರಿತು ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಉಡುಪಿಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕ ಜಗದೀಶ್ ಮಾತನಾಡಿ, ಎಲ್ಲಾ ಕಚೇರಿಗಳಲ್ಲಿ ಭ್ರಷ್ಠಾಚಾರ ಜಾಗೃತಿಯು ಒಂದು ದಿನಕ್ಕೆ ಮಾತ್ರ ಸೀಮಿತ ವಾಗದೇ, ವರ್ಷ ಪೂರ್ತಿ ಜಾಗೃತಿ ಮೂಡಬೇಕು. ನೌಕರರು ಸಾರ್ವಜನಿಕರಿಂದ ದೂರುಗಳು ಬಾರದಂತೆ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.

ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತೆ ರೂಪಾ, ಉಡುಪಿ ಲೋಕಾಯುಕ್ತದ ಪೊಲೀಸ್ ನಿರೀಕ್ಷಕ ಜಯರಾಮ ಗೌಡ ಉಪಸ್ಥಿತರಿದ್ದರು. ಅಬಕಾರಿ ನಿರೀಕ್ಷಕಿ ಶುಭದಾ ಸಿ ನಾಯಕ್ ಸ್ವಾಗತಿಸಿದರು. ಉಪನಿರೀಕ್ಷಕ ಶಿವಶಂಕರ್ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಅಬಕಾರಿ, ಅರಣ್ಯ, ಉಡುಪಿ ತಾಪಂ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News