ಅಹಿಂಸೆಯ ನೈಜಾರ್ಥ ಪರಿಕಲ್ಪನೆ ಯುವ ಸಮುದಾಯಕ್ಕೆ ಅರ್ಥ ಮಾಡಿಸುವಲ್ಲಿ ಸೋಲಾಗಿದೆ: ನಿಕೇತ್ ರಾಜ್
ಪುತ್ತೂರು: ಮಹಾತ್ಮ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆಯ ನೈಜಾರ್ಥದ ಪರಿಕಲ್ಪನೆಯನ್ನು ಯುವ ಸಮುದಾಯಕ್ಕೆ ಅರ್ಥ ಮಾಡಿಸುವಲ್ಲಿ ಸೋಲಾಗಿದೆ. ಅದೇ ರೀತಿ ಕಾಂಗ್ರೆಸ್‍ನ ಸಾಧನೆಗಳನ್ನು ಯುವ ಜನಾಂಗಕ್ಕೆ ಅಂದೇ ತಿಳಿಸದಿರುವುದರಿಂದ ತಪ್ಪಾಗಿದೆ ಎಂದು ಕೆಪಿಸಿಸಿ ವಕ್ತಾರ ನಿಕೇತ್‍ರಾಜ್ ಮೌರ್ಯ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಳೆದ 13 ದಿನಗಳಿಂದ ವಿವಿಧ ಗ್ರಾಮಗಳಲ್ಲಿ ನಡೆದ ಗ್ರಾಮ ಸ್ವರಾಜ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಶುಕ್ರವಾರ ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಿತು. ನಿಕೇತ್ ರಾಜ್ ಮೌರ್ಯ ಅವರು ಈ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕಾಂಗ್ರೆಸ್ ಪಕ್ಷವು ಯಾರನ್ನೂ ಶಾಸಕರನ್ನಾಗಿ, ಸಂಸದರನ್ನಾಗಿ, ಮುಖ್ಯಮಂತ್ರಿಗಳನ್ನಾಗಿ, ಪ್ರಧಾನ ಮಂತ್ರಿಗಳನ್ನಾಗಿ ಮಾಡಲು ಸೃಷ್ಟಿಯಾಗಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಧ್ಯೋತಕವಾಗಿ ಕಾಂಗ್ರೆಸ್ ಉದಯವಾಗಿತ್ತು. ಮಹಾತ್ಮ ಗಾಂಧೀಜಿಯ ಸಾಂಗತ್ಯದಿಂದಾಗಿ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಬಲಗೊಂಡಿತು. ವಿವಿಧ ಭಾಷೆ, ಜಾತಿ. ಧರ್ಮ ಸಂಸ್ಕೃತಿಯನ್ನು ಒಟ್ಟುಗೂಡಿಸಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಮಹಾತ್ಮ ಗಾಂಧೀಜಿಯನ್ನೇ ಕೊಂದವರಿಗೆ ಮಾಲೆ ಹಾಕುವ ಜನರು ನಮ್ಮಲ್ಲಿರುವುದು ದೇಶದ ದುರಂತವಾಗಿದೆ. ಕಾಂಗ್ರೆಸ್ ಏನು ಮಾಡಿದೆ ಎನ್ನುವ ಬಿಜೆಪಿಗರು ಇದೀಗ ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ಮಾಡಿರುವುದನ್ನು ಎಲ್ಲಾ ಮಾರಾಟ ಮಾಡುತ್ತಿದ್ದಾರೆ. ಜನರಿಗೆ ಕುಡಿಯುವ ನೀರು, ವಾಸದ ಮನೆ, ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯವನ್ನು ಒದಗಿಸಿರುವುದೇ ಕಾಂಗ್ರೆಸ್ ಪಕ್ಷ ಈಗ ಕಾಂಗ್ರೆಸ್‍ನಿಂದ ಲಾಭ ಪಡೆದು ಬೈಕ್‍ನಲ್ಲಿ ಓಡಾಡುತ್ತಿರುವವರು ಕೇಸರಿ ಶಾಲು ಹಾಕಿಕೊಂಡು ತಿರುಗುತ್ತಿದ್ದಾರೆ ಎಂದರು.
ಎಐಸಿಸಿ ಕಾರ್ಯದರ್ಶಿ ಮೋಹನ್ ಪಿ.ವಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ, ಪುತ್ತೂರ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಪ್ರವೀಣ್ ಚಂದ್ರ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪುತ್ತೂರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ನಿರೂಪಿಸಿದರು.