ಮುಂದಿನ 40 ವರ್ಷಗಳೊಳಗೆ ಮಹಿಳೆಯರೂ ಸೇನೆಯ ವರಿಷ್ಠರಾಗಲು ಸಾಧ್ಯ: ಜ.ನರವಣೆ

Update: 2021-10-29 16:49 GMT

ಪುಣೆ, ಅ.28: ರಾಷ್ಟ್ರೀಯ ರಕ್ಷಣಾ ಅಕಾಡಮಿ(ಎನ್ಡಿಎ)ಗೆ ಮಹಿಳೆಯರ ಸೇರ್ಪಡೆಯು ಲಿಂಗ ಸಮಾನತೆಯತ್ತ ಇಟ್ಟಿರುವ ಹೆಜ್ಜೆಯೆಂದು ಸೇನಾ ವರಿಷ್ಠ ಜನರಲ್ ಎಂ.ಎಂ.ನರವಣೆ ಶುಕ್ರವಾರ ತಿಳಿಸಿದ್ದಾರೆ. ‘‘ನಾನು ಈಗ ಎಲ್ಲಿ ನಿಂತಿದ್ದೇನೆಯೋ ಮುಂದಿನ 40 ವರ್ಷಗಳೊಳಗೆ ಮಹಿಳೆಯರೂ ಅದೇ ಸ್ಥಾನದಲ್ಲಿ ಇನ್ನು ಮುಂದೆ ನಿಲ್ಲಬಹುದಾಗಿದೆ’’ ಎಂದವರು ಹೇಳಿದ್ದಾರೆ.

ಪುಣೆಯಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡಮಿಯಲ್ಲಿ ತರಬೇತು ಪಡೆದವರ ಉತ್ತೀರ್ಣತಾ ಪರೇಡ್ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನರಲ್ ನರವಣೆ ಅವರು, ನಾವು ಪುಣೆಯಲ್ಲಿರುವ ಎನ್ಡಿಎನಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸಲ್ಲಿದ್ದೇವೆ ಹಾಗೂ ಅವರು ಪುರುಷ ಕ್ಯಾಡೆಟ್ಗಳಿಗೆ ಸರಿಸಮಾನವಾದ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆಂಬ ಬಗ್ಗೆ ನನಗೆ ಖಾತರಿಯಿದೆ. ಲಿಂಗ ಸಮಾನತೆಯೆಡೆಗೆ ಇದೊಂದು ಪ್ರಪ್ರಥಮ ಹೆಜ್ಜೆಯಾಗಿದೆ ಹಾಗೂ ದೇಶದಲ್ಲಿ ನಡೆಯುವ ಇಂತಹ ಈ ಎಲ್ಲಾ ಉಪಕ್ರಮಗಳಿಗೆ ಸೇನೆಯು ಸದಾ ಮುಂಚೂಣಿಯಲ್ಲಿರುತ್ತದೆ ಎಂದರು.
 
‘‘ಇದರ ಪರಿಣಾಮವಾಗಿ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸವಾಲುದಾಯಕವಾದ ಹೊಣೆಗಾರಿಕೆಗಳನ್ನು ಹೊಂದಲು ಮಹಿಳೆಯರು ಸಶಕ್ತರಾಗಲಿದ್ದಾರೆ. ಹಾಗೆಂದು ಈಗ ಯಾವುದೇ ಮಹಿಳಾ ಸೇನಾಧಿಕಾರಿಗಳು ತರಬೇತಿ ಪಡೆಯುತ್ತಿಲ್ಲವೆಂದಲ್ಲ. ಚೆನ್ನೈಯಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡಮಿಯಲ್ಲಿ ಮಹಿಳಾ ಕೆಡೇಟ್ಗಳು ತರಬೇತಿ ಪಡೆಯುತ್ತಿದ್ದು, ಅವರು ಅಭೂತಪೂರ್ವವಾಗಿ ಉತ್ತಮ ಕಾರ್ಯವನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.

ಎನ್ಡಿಎಗೆ ಸೇರ್ಪಡೆಗೊಂಡ ಮಹಿಳಾ ಕೆಡೆಟ್ಗಳಿಗೆ ತರಬೇತಿ ನೀಡಿಕೆಯಲ್ಲಿ ಏನಾದರೂ ವ್ಯತ್ಯಾಸವನ್ನು ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ನರವಣೆ ಅವರು, ‘‘ಎನ್ಡಿಎಯಲ್ಲಿ ತರಬೇತಿ ಕ್ರಮವು ಹಿಂದಿನಂತೆಯೇ ಇರಲಿದೆಯೆಂದು ಸ್ಪಷ್ಟಪಡಿಸಿದರು. ಚೆನ್ನೈನಲ್ಲಿರುವ ಅಧಿಕಾರಿಗಳ ಅಕಾಡಮಿಯಲ್ಲಿಯೂ ಕೆಡೆಟ್ಗಳು ಎಲ್ಲಾ ತರಬೇತಿಗಳನ್ನು ಜೊತೆಯಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ತಂತ್ರಜ್ಞಾನಯುತವಾದ ಸಮರಕಲೆಯಲ್ಲಿ ಭಾರತದ ಶಕ್ತಿಯು, ಇತರ ಯಾವುದೇ ಅಭಿವೃದ್ಧಿ ಹೊಂದುತ್ತಿರುವ ಅಥವಾ ಅಭಿವೃದ್ಧಿ ದೇಶದಲ್ಲಿ ಯಾವುದೇ ರೀತಿಯಲ್ಲಿ ಹಿಂದೆ ಬಿದ್ದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News